ಬೆಂಗಳೂರು / ದೊಡ್ಡಬಳ್ಳಾಪುರ: ದೇಶಾದ್ಯಂತ ಸೋಮವಾರ ಆರಂಭವಾದ ಮೆಗಾ ಲಸಿಕೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, 80 ಲಕ್ಷಕ್ಕೂ ಹೆಚ್ಚು ಮಂದಿ ಒಂದೇ ದಿನ ಲಸಿಕೆ ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ವಿಶ್ವದಲ್ಲಿ ಒಂದೇ ದಿನ ಇಷ್ಟು ಬೃಹತ್ ಪ್ರಮಾಣದಲ್ಲಿ ಲಸಿಕೆ ಹಾಕಿದ ದಾಖಲೆಯನ್ನೂ ಭಾರತ ನಿರ್ಮಾಣ ಮಾಡಿದ್ದರೆ, ಕರ್ನಾಟಕದಲ್ಲಿ 11 ಲಕ್ಷದಷ್ಟು ಮಂದಿ ಲಸಿಕೆ ಪಡೆದು ದಾಖಲೆ ನಿರ್ಮಿಸಿದ್ದಾರೆ.
ರಾಜ್ಯದಲ್ಲಿ 10.7 ಲಕ್ಷ ಮಂದಿಗೆ ಲಸಿಕೆ: ರಾಜ್ಯದಲ್ಲಿ 18 ರಿಂದ 44 ವರ್ಷದ ಏಳು ಲಕ್ಷ ಮಂದಿಯ ಸಹಿತ 10.7 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ನಾಲ್ಕು ಪಟ್ಟು ಅಧಿಕ ಲಸಿಕೆ ವಿತರಣೆ ಮಾಡಲಾಗಿದೆ.
ಬೆಂಗಳೂರು ಪ್ರಥಮ: ದೇಶದಲ್ಲಿ ಅತೀ ಹೆಚ್ಚು ಮಂದಿ ಲಸಿಕೆ ಪಡೆದ ನಗರವಾಗಿ ಬೆಂಗಳೂರು ಗುರುತಿಸಿ ಕೊಂಡಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಮಧ್ಯ ಪ್ರದೇಶದ ಇಂದೋರ್ ಇದೆ. ಬೆಂಗಳೂರಿನಲ್ಲಿ ಸೋಮವಾರ 2.13 ಲಕ್ಷ ಮಂದಿ ಲಸಿಕೆ ಪಡೆದರೆ ಇಂದೋರ್ ನಲ್ಲಿ 2.11 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ. ರಾಜ್ಯಗಳ ಪೈಕಿ ಮಧ್ಯಪ್ರದೇಶ 15.5 ಲಕ್ಷ ಮಂದಿಗೆ ಲಸಿಕೆ ನೀಡಿ ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ದೊಡ್ಡಬಳ್ಳಾಪುರದಲ್ಲಿ ದಾಖಲೆ: ಮೆಗಾ ಲಸಿಕೆ ಅಭಿಯಾನಕ್ಕೆ ತಾಲೂಕಿನಲ್ಲಿ ಅಭೂತಪೂರ್ವ ಬೆಂಬಲ ದೊರೆತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ.
ದೊಡ್ಡಬಳ್ಳಾಪುರದಲ್ಲಿ ಒಂದೇ ದಿನ ಅತಿ ಹೆಚ್ಚು 6287 ಮಂದಿ ಲಸಿಕೆ ಪಡೆದರೆ, ಜಿಲ್ಲೆಯ ಇತರೆ ತಾಲೂಕುಗಳಾದ ದೇವನಹಳ್ಳಿ 6053, ನೆಲಮಂಗಲ 5041 ಹಾಗೂ ಹೊಸಕೋಟೆಯಲ್ಲಿ 5004 ಮಂದಿ ಸೇರಿ ಒಟ್ಟು 22385 ಲಸಿಕೆ ಪಡೆದಿದ್ದಾರೆ.
ಲಸಿಕೆ ಕಾರ್ಯ: ನಗರದ ತಾಯಿ ಮಗು ಆರೋಗ್ಯ ಕೇಂದ್ರ, ಆಯುರ್ವೇದಿಕ್ ಆಸ್ಪತ್ರೆ, ಹಳೇ ಬಸ್ ಸ್ಟ್ಯಾಂಡ್ ಸರ್ಕಾರಿ ಆಸ್ಪತ್ರೆ, ಗ್ರಾಮಾಂತರ ಪ್ರದೇಶದ ಕನಸವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೂಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ದೊಡ್ಡಹೆಜ್ಜಾಜಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಕ್ಕರೆಗೊಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಸಲು ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ದೊಡ್ಡತುಮಕೂರು ಪ್ರಾಥಮಿಕ ಆರೋಗ್ಯ ಕೇಂದ್ರ, S.S ಘಾಟಿ ಪ್ರಾಥಮಿಕ ಆರೋಗ್ಯ ಕೇಂದ್ರ, ತೂಬಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಮೆಳೆಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..