ದಾವಣಗೆರೆ: ಕೋವಿಡ್‍ನ ಮೊದಲನೆ ಮತ್ತು ಎರಡನೆ ಅಲೆಯಲ್ಲಿ ಬಿಪಿಎಲ್, ಎಪಿಎಲ್ ಎಂಬ ತಾರತಮ್ಯವಿಲ್ಲದೆ, ಕೋವಿಡ್-19 ಸೋಂಕಿನಿಂದ ಮೃತಪಟ್ಟ ಎಲ್ಲ ಕುಟುಂಬಗಳಿಗೂ ತಲಾ ಒಂದು ಲಕ್ಷ ರೂ. ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಪರಿಶೀಲನಾ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ವರ್ಷ ಕೋವಿಡ್‍ನ ಮೊದಲನೆ ಅಲೆಯಲ್ಲಿ 264 ಜನ ಹಾಗೂ ಈ ವರ್ಷದ ಮಾರ್ಚ್ ನಿಂದ ಈವರೆಗಿನ ಎರಡನೆ ಅಲೆಯಲ್ಲಿ 273 ಜನ ಸೇರಿದಂತೆ ಒಟ್ಟು 537 ಜನ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ವ್ಯಕ್ತಿಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಕೋವಿಡ್‍ನಿಂದ ಸಂಭವಿಸಿದ ಸಾವಿಗೆ ಪರಿಹಾರ ನೀಡುವ ವಿಷಯದಲ್ಲಿ ಬಿಪಿಎಲ್, ಎಪಿಎಲ್ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಪರಿಹಾರ ನೀಡುವಂತೆ ಈಗಾಗಲೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 537 ಜನ ಕೋವಿಡ್‍ನಿಂದ ಮೃತಪಟ್ಟಿದ್ದು, ಪ್ರತಿ ವ್ಯಕ್ತಿಗೆ 01 ಲಕ್ಷ ರೂ. ಗಳಂತೆ ಪರಿಹಾರ ನೀಡಿದರೆ, 5.37 ಕೋಟಿ ರೂ. ಅನುದಾನ ಜಿಲ್ಲೆಗೆ ಬೇಕಾಗುತ್ತದೆ. ಆದಷ್ಟು ಶೀಘ್ರ ಮುಖ್ಯಮಂತ್ರಿಗಳು ಈ ಕುರಿತು ನಿರ್ಧಾರ ಕೈಗೊಳ್ಳುವರು ಎಂದರು.
ಇದಕ್ಕೂ ಮುನ್ನ ಜರುಗಿದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಭವಿಸಿರುವ ಕೋವಿಡ್ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಹೆಸರು, ವಿಳಾಸವುಳ್ಳ ಸಂಪೂರ್ಣ ವಿವರವಾದ ಪಟ್ಟಿಯನ್ನು ಜಿಲ್ಲಾಧಿಕಾರಿಗಳು, ತಾಲ್ಲೂಕುವಾರು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು, ಸರ್ಕಾರ ನೀಡುವ ಪರಿಹಾರವನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಎಲ್ಲ ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಆ ಕುಟುಂಬಗಳಿಗೆ ಗೌರವಪೂರ್ವಕವಾಗಿ ಸಮರ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಖಾಸಗಿ ಬ್ಯಾನರ್ ನಡಿ ಸರ್ಕಾರಿ ಲಸಿಕೆ ನೀಡುವಂತಿಲ್ಲ: ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಅವರು ಮಾತನಾಡಿ, ಕೋವಿಡ್ ಸೋಂಕಿನಿಂದ ಜನರ ಪ್ರಾಣ ರಕ್ಷಣೆಗಾಗಿ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತಿದೆ, ಅಲ್ಲದೆ ರಾಜ್ಯ ಮತ್ತು ಜಿಲ್ಲೆಗಳಿಗೆ ಸಮರ್ಪಕವಾಗಿ ಲಸಿಕೆ ಹಂಚಿಕೆ ಮಾಡುತ್ತಿದೆ. ಆದರೆ ನಗರದಲ್ಲಿ ಖಾಸಗಿ ಬ್ಯಾನರ್‍ನಡಿ ಸರ್ಕಾರದಿಂದ ಪೂರೈಕೆ ಮಾಡುವ ಉಚಿತ ಲಸಿಕೆಯನ್ನು ಖಾಸಗಿ ಶಿಬಿರದಲ್ಲಿ ನೀಡಿ ಪ್ರಚಾರ ಗಿಟ್ಟಿಸುವ ಯತ್ನ ಮಾಡುತ್ತಿದ್ದಾರೆ, ಖಾಸಗಿಯವರು ಬ್ಯಾನರ್‍ನಲ್ಲಿ ತಮ್ಮ ಫೋಟೋ ಹಾಕಿಕೊಂಡು, ತಮ್ಮ ಸ್ವಂತ ಹಣದಲ್ಲಿ ಪಡೆದ ಲಸಿಕೆಯನ್ನು ಯಾವ ರೀತಿಯಾದರೂ ಹಾಕಿಕೊಳ್ಳಲಿ, ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ, ಆದರೆ ಖಾಸಗಿ ಬ್ಯಾನರ್‍ನಡಿ ಸರ್ಕಾರದಿಂದ ನೀಡುವ ಉಚಿತ ಲಸಿಕೆಯನ್ನು ವಿತರಿಸಲು ಅವಕಾಶವಿಲ್ಲ, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತವಾರಿ ಸಚಿವರು, ಭಾರತ ಸರ್ಕಾರ ನೀಡುತ್ತಿರುವ ಉಚಿತ ಲಸಿಕೆಯನ್ನು ಖಾಸಗಿ ಬ್ಯಾನರ್‍ನಡಿ ಹಾಕಲು ಅವಕಾಶ ನೀಡಿದರೆ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಡಿಹೆಚ್‍ಒ ಡಾ. ನಾಗರಾಜ್ ಹಾಗೂ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಅವರಿಗೆ ಎಚ್ಚರಿಕೆ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..