ಬೆಂ.ಗ್ರಾ.ಜಿಲ್ಲೆ: ಮುಜರಾಯಿ ದೇವಾಲಯಗಳ ಆಸ್ತಿ ರಕ್ಷಣೆ, ಆಡಳಿತಾತ್ಮಕ ನಿರ್ವಹಣೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಧಾರ್ಮಿಕ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಸಶಕ್ತವಾಗಿ ಕಾರ್ಯನಿರ್ವಹಿಸಬೇಕು ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಧಾರ್ಮಿಕ ದತ್ತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಯಾವುದೇ ದೇವಾಲಯಗಳ ಆಸ್ತಿ ಅತಿಕ್ರಮಣ ಕಂಡುಬಂದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತೆರವುಗೊಳಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.
ಪ್ರತಿಯೊಬ್ಬ ಭಕ್ತರು ನೀಡಿದ ಹಣಕ್ಕೆ ಲೆಕ್ಕ ಇರಬೇಕು ಎಂದ ಅವರು, ಹುಂಡಿ ಹಣ ಎಣಿಸುವ ಸಂದರ್ಭದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು, ತಪ್ಪಿದಲ್ಲಿ ಅಂತಹ ಅಧಿಕಾರಿಗಳನ್ನು ಜವಾಬ್ದಾರಿ ಸ್ಥಾನದಿಂದ ಬಿಡುಗಡೆಗೊಳಿಸಿ ಉತ್ತಮ ಅಧಿಕಾರಿಗಳನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಘಾಟಿ ಸುಬ್ರಹ್ಮಣ್ಯ ದೇವಾಲಯದ ಸಮೀಪ 25 ಎಕರೆ ಪ್ರದೇಶದಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಟ್ರೀ ಪಾರ್ಕ್ ನಿರ್ಮಿಸಲು ಉದ್ದೇಶಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಸಾಧ್ಯವಾದ್ದಲ್ಲಿ ಗೋಶಾಲೆಯನ್ನು ಸಹ ನಿರ್ಮಿಸುವಂತೆ ಸಲಹೆ ನೀಡಿದರು.
ಹಣದ ಕೊರತೆ ಇರುವ ‘ಸಿ’ ವರ್ಗದ ದೇವಾಲಯಗಳನ್ನು ‘ಎ’ ವರ್ಗದ ದೇವಾಲಯಗಳು ದತ್ತು ಪಡೆದು ಅಭಿವೃದ್ಧಿ ಪಡಿಸಬಹುದು ಎಂದು ತಿಳಿಸಿದ ಸಚಿವರು, ಧಾರ್ಮಿಕ ಪರಿಷತ್ ಸದಸ್ಯರು ಕೇವಲ ‘ಎ’ ವರ್ಗದ ದೇವಾಲಯಗಳಿಗೆ ಸೀಮಿತವಾಗದೇ ಎಲ್ಲಾ ವರ್ಗದ ದೇವಾಲಯಗಳನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಬೇಕು ಎಂದರು.
ಕೋವಿಡ್-19 ತೀವ್ರತೆ ಕಡಿಮೆಯಾದ ನಂತರ ವಿವಿಧ ಸಮಯಕ್ಕೆ ಮುಹೂರ್ತ ನಿಗದಿಗೊಳಿಸಿ, ಸಪ್ತಪದಿ ಸರಳ ವಿವಾಹ ಕಾರ್ಯಕ್ರಮವನ್ನು ಮರು ಚಾಲನೆಗೊಳಿಸಲಾಗುವುದು ಎಂದರಲ್ಲದೆ, ಆಡಳಿತ ಹಾಗೂ ಅಭಿವೃದ್ಧಿ ಕುರಿತು ಧಾರ್ಮಿಕ ಪರಿಷತ್ ಸದಸ್ಯರಿಗೆ ಮುಂದಿನ ದಿನಗಳಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಪೌರಾಡಳಿತ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಎನ್.ನಾಗರಾಜು(ಎಂ.ಟಿ.ಬಿ) ಮಾತನಾಡಿ, ಇತಿಹಾಸ ಪ್ರಸಿದ್ಧ ದೇವಾಲಯಗಳು ಶಿಥಿಲಗೊಂಡು ಧರೆಗೆ ಉರುಳುವ ಸಾಧ್ಯತೆ ಇರುವುದರಿಂದ ದೇವಾಲಯಗಳ ಜೊತೆಗೆ ಇತಿಹಾಸ ನಾಶ ಹೊಂದುವ ಸಾಧ್ಯತೆ ಇರುವುದರಿಂದ, ಶಿಥಿಲಗೊಂಡ ದೇವಾಲಯಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಆನಂದ್ ಗುರೂಜಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ, ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ಮುಜರಾಯಿ ಇಲಾಖೆ ಉಪ ವಿಭಾಗಾಧಿಕಾರಿ ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಹಶೀಲ್ದಾರ್ ಹೇಮಾವತಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..