ದೊಡ್ಡಬಳ್ಳಾಪುರ: ಜನ ಸೇವೆಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಶ್ರಮವನ್ನು ಹಾಗೂ ವೈದ್ಯಕೀಯ ಕ್ಷೇತ್ರದ ಮಹತ್ವವನ್ನು ವರ್ಷದ ಒಂದು ದಿನವಾದರೂ ಜನತೆಗೆ ತಿಳಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಹೇಳಿದರು.
ರಾಷ್ಟ್ರೀಯ ವೈದ್ಯಕೀಯ ದಿನಾಚರಣೆ ಅಂಗವಾಗಿ ನಗರದ ಒಕ್ಕಲಿಗರ ಸಮುದಾಯದ ಭವನದಲ್ಲಿ ಆಯೋಜಿಸಿದ್ದ ವೈದ್ಯರಿಗೆ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋವಿಡ್ ಸಂಧರ್ಭದಲ್ಲಿ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳ ತ್ಯಾಗ – ಬಲಿದಾನ ಅಪಾರವಾಗಿದೆ. ವಯಕ್ತಿಕ ಕುಟುಂಬವ ಬದಿಗೊತ್ತಿ ಕರೊನಾ ವಿರುದ್ದ ಅವರು ನಡೆಸಿದ ಹೋರಾಟ ಪ್ರಶಂಸನೀಯವಾಗಿದೆ. ಕರೊನಾ ವಿರುದ್ದ ಸರ್ಕಾರ ಹಾಗೂ ವೈದ್ಯಕೀಯ ಕ್ಷೇತ್ರ ಒಟ್ಟಾಗಿ ಶ್ರಮಿಸಿದರು ವೈದ್ಯಕೀಯ ಕ್ಷೇತ್ರದ ಪಾತ್ರ ಸರ್ಕಾರಕ್ಕಿಂತ ಹೆಚ್ಚಾಗಿದೆ ಎಂದರು.
ವೈದ್ಯರ ಅವಹೇಳನ ಸಲ್ಲದು: ಇತ್ತೀಚಿನ ದಿನಗಳಲ್ಲಿ ಚಿತ್ರಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ಅವಹೇಳನಕಾರಿಯಾಗಿ ಚಿತ್ರಿಸುವುದು, ಅವಹೇಳನವಾಗಿ ಮಾತುಗಳು ಆಡುವುದನ್ನು ಎಲ್ಲರೂ ಒಟ್ಟಾಗಿ ಖಂಡಿಸಬೇಕಿದೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ವೈದ್ಯಕೀಯ ಕ್ಷೇತ್ರವನ್ನು ದೂಶಿಸುವುದು ಸಲ್ಲದು ಎಂದರು.
ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ವೈದ್ಯರ ಮಹತ್ವ ಈ ಹಿಂದಿಗಿಂತಲೂ ಕರೊನಾ ಸಂದರ್ಭದಲ್ಲಿ ಜನರಿಗೆ ಹೆಚ್ಚಾಗಿ ಅರಿವಾಗಿದೆ. ತಾಲೂಕಿನ ವೈದ್ಯಕೀಯ ಸಿಬ್ಬಂದಿಗಳು ಮೊದಲನೆ ಹಾಗೂ ಎರಡನೇ ಅಲೆಯಲ್ಲಿ ಬಹಳಷ್ಟು ಕಾಳಜಿವಹಿಸಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೋವಿಡ್ ನಿಗ್ರಹಕ್ಕೆ ನೀಡಿದ ಒತ್ತಡದ ನಡುವೆಯೂ ಮಾಡಿದ ಸೇವೆ ಪ್ರಶಂಸನೀಯ. ಇದೇ ರೀತಿ ತಾಲೂಕಿನಲ್ಲಿ ಸೇವೆಯನ್ನು ಮುಂದುವರೆಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ವೈದ್ಯಕೀಯ ಸಿಬ್ಬಂದಿಗಳು ತಮ್ಮ ಕುಟುಂಬವ ಬದಿಗೊತ್ತಿ ಕರೊನಾ ವಾರಿಯರ್ಸ್ ಗಳಾಗಿ ಸಲ್ಲಿಸಿರುವ ಸೇವೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು.
ಕೋವಿಡ್-19 ಕರ್ತವ್ಯದ ವೇಳೆ ಮೃತಪಟ್ಟ ವೈದ್ಯಕೀಯ ಸಿಬ್ಬಂದಿಗಳ ಕುಟುಂಬಕ್ಕೆ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗವನ್ನು ಸರ್ಕಾರ ತ್ವರಿತವಾಗಿ ನೀಡಬೇಕೆಂದು ಒತ್ತಾಯಿಸಿದ ಟಿ.ವೆಂಕಟರಮಣಯ್ಯ, ತಾಲೂಕಿನಲ್ಲಿ ಯಾವುದೇ ವೈದ್ಯಕೀಯ ವಿದ್ಯಾಲಯ ಇಲ್ಲವಾಗಿದ್ದು,
ಇದನ್ನು ಗಮನಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ಜಿಲ್ಲಾಸ್ಪತ್ರೆ ನೀಡಿದ್ದರು ಹಾಗೂ ಸಮ್ಮಿಶ್ರ ಸರ್ಕಾರದ ಅವದಿಯಲ್ಲಿ 90 ಕೋಟಿ ರೂಗಳ ಅನೋದನೆಯಾಗಿತ್ತು. ಆದರೆ ಇದು ಕಳೆದ ಎರಡು ವರ್ಷದಿಂದ ಸಂಪುಟ ನಿರ್ಣಯವಾಗದೆ ಉಳಿದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತ್ವರಿತವಾಗಿ ಸಂಪುಟ ನಿರ್ಣಯವನ್ನು ಕೈಗೊಂಡು ತಾಲೂಕಿನ ಜನರ ವೈದ್ಯಕೀಯ ಸೌಲಭ್ಯಕ್ಕೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಮೂರನೇ ಅಲೆ ಆತಂಕ: ಎರಡನೇ ಅಲೆಯ ಆತಂಕ ಸ್ವಲ್ಪ ಮಟ್ಟಿಗೆ ತಾಲೂಕಿನಲ್ಲಿ ಕಡಿಮೆಯಾಗಿದ್ದು, ಮೂರನೆ ಅಲೆಯ ಆತಂಕ ಎದುರಿಗಿದೆ. ಈ ನಿಟ್ಟಿನಲ್ಲಿ ವೈದ್ಯರು ಸಜ್ಜಾಗಬೇಕು ಹಾಗೂ ಸಾರ್ವಜನಿಕರು ಸೋಂಕಿಗೆ ಒಳಗಾಗದಂತೆ ಕಾಳಜಿವಹಿಸಬೇಕಿದೆ ಎಂದರು.
ಬ್ಲಾಕ್ ಫಂಗಸ್ ಯಶಸ್ವಿ ಚಿಕಿತ್ಸೆ: ಬ್ಲಾಕ್ ಫಂಗಸ್ ಚಿಕಿತ್ಸೆಗೆ ತಾಲೂಕಿನ ಜನತೆ ಬೆಂಗಳೂರನ್ನು ಅವಲಂಬಿಸಬೇಕಿತ್ತು. ಈ ಕುರಿತು ಡಾ.ಸಂತೋಷ್ ಹಾಗೂ ಇತರ ವೈದರ ನಡುವೆ ನಡೆಸಿದ ಚರ್ಚೆಯ ವೇಳೆ ಅಗತ್ಯ ಸಾಧನಗಳ ದೊರಕಿದರೆ ತಾಲೂಕಿನಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಲು ಸಿದ್ದವೆಂದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸಹಕಾರದಿಂದ ಸಾಧನಗಳು ತಾಲೂಕಿಗೆ ದೊರಕಿದ್ದು, ಬುಧವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಸುಮಾರು 60 ವೈದ್ಯರನ್ನು ಸನ್ಮಾನಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ಕೊಡಿಗೇಹಳ್ಳಿ ಗ್ರಾಪಂ ಸದಸ್ಯೆ ನಾಗರತ್ನಮ್ಮ ಮತ್ತಿತರರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..