ದೊಡ್ಡಬಳ್ಳಾಪುರ: ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸದೆ ಸೋಂಕು ತೀವ್ರವಾದರೆ ಮತ್ತೆ ವ್ಯವಹಾರ ಬಂದ್ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಬಳಿ ನಿರ್ಮಿಸಿರುವ 70 ಹಾಸಿಗೆಗಳ ಮೇಕ್‌ಶಿಫ್ಟ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,
ಕೋವಿಡ್ ತೀವ್ರವಾದ ಹಿನ್ನೆಲೆ ವ್ಯವಹಾರ ಬಂದ್ ಮಾಡಲಾದ ಕಾರಣ ಕೈಕಟ್ಟಿ ಕೂರುವ ಪರಿಸ್ಥಿತಿ ಎದುರಾಗಿತ್ತು. ಅನೇಕ ಪ್ರಯತ್ನಗಳ ನಂತರ 15 ದಿನಗಳ ವಿನಾಯಿತಿ ಕಲ್ಪಿಸಲಾಗಿದೆ. ಆದರೆ ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ಸೋಂಕು ತೀವ್ರವಾಗಿ ಮತ್ತೆ ವ್ಯವಹಾರ ಬಂದ್ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಈ ನಿಟ್ಟಿನಲ್ಲಿ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಅಗತ್ಯವಾಗಿದೆ.
ಕೋವಿಡ್ ಮೂರನೆ ಅಲೆಯನ್ನು ತಡೆಗಟ್ಟಲು ಮುಂಜಾಗ್ರತೆ ಹಿನ್ನೆಲೆ ಖಾಸಗಿ ಕಂಪನಿಗಳ ಸಿಎಸ್ ಆರ್ ಅನುದಾನದ ಅಡಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆ ಬಳಿ 70 ಹಾಸಿಗೆಗಳ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಿಸಲಾಗಿರುವುದು ರಾಜ್ಯದಲ್ಲೆ ಮೊದಲ ಹಾಗೂ ವಿನೂತನದ್ದಾಗಿದೆ
ದೇಶದಲ್ಲಿ ಆರು ಕಡೆ ಮೇಕ್‌ಶಿಫ್ಟ್ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, ದೇಶದಲ್ಲಿಯೇ ಅತಿ ಶೀಘ್ರವಾಗಿ ಈ ಆಸ್ಪತ್ರೆ ನಿರ್ಮಿಸಿರುವ ರಾಜ್ಯ ಕರ್ನಾಟಕವಾಗಿದೆ.
ಸುಮಾರು 4 ಕೋಟಿ ವೆಚ್ಚದಲ್ಲಿ ಅಮೆರಿಕನ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಮೂಲಕ ದಾನಿಗಳಾದ ಲೆನವೋ, ಗೋಲ್ಡ್‌ಮನ್ ಪ್ಯಾಚಸ್ ಕಂಪನಿಗಳು ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಾಣಕ್ಜೆ ನೆರವು ನೀಡಿರುವುದು ಪ್ರಶಂಸನೀಯ.
ಈ ಮೇಕ್‌ಶಿಫ್ಟ್ ಆಸ್ಪತ್ರೆ ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಜನರಿಗೆ ಆರೋಗ್ಯ ಭಾಗ್ಯ ಕಲ್ಪಿಸಲು ಅನುಕೂಲವಾಗಲಿದೆ.ಅಲ್ಲದೆ ಕೋವಿಡ್ ನಂತರವೂ ಸಾರ್ವಜನಿಕರ ಸೇವೆಗೆ ಪ್ರಯೋಜನಕಾರಿಯಾಗಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ತಡೆಗಟ್ಟಲು ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ಸು ಕಂಡಿದೆ.
ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ವೈದ್ಯರು, ನರ್ಸ್ಗಳು, ಸ್ವಾಬ್ ಟೆಸ್ಟ್ ಮಾಡುವವರು ಹಳ್ಳಿಗಳಿಗೆ ತೆರಳಿ ಸ್ಥಳದಲ್ಲಿಯೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದೇ ರೀತಿ ಇತರ ಜಿಲ್ಲೆಗಳಲ್ಲಿ ಈ ಯೋಜನೆ ವಿಸ್ತರಿಸಲಾಗಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ತಜ್ಞ ವೈದ್ಯರು ಜಿಲ್ಲೆಯ ತಾಲೂಕುಗಳಲ್ಲಿ ಐದು ತಂಡದಂತೆ ಹಳ್ಳಿಗಳಿಗೆ ತೆರಳಿ 4467 ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗಿದ್ದು, ಇತರೆ ರೋಗಕ್ಕೆ ಮುಂದಿನ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ವಹಿಸಿದ್ದರು, ಪೌರಾಡಳಿತ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು(ಎಂ.ಟಿ.ಬಿ), ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ದೇವನಹಳ್ಳಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪವಿಭಾಗಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಮತ್ತಿತರಿದ್ದರು.