ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಖಾಸಗೀಕರಣ ಮಾಡದಂತೆ ಮನವಿ ಮಾಡಿದ್ದಾರೆ. ಹೀಗಾಗಿಯೇ ಸಂಸತ್ ಸದಸ್ಯೆ ಸುಮಲತಾ ಮತ್ತು ಎಚ್ಡಿಕೆ ನಡುವೆ ವಾಕ್ಸಮರ ಆರಂಭವಾಗಿರುವುದು.ಕಾರ್ಖಾನೆ ಮತ್ತೆ ಪ್ರಾರಂಭವಾಗಬೇಕು ಎನ್ನುವುದಷ್ಟೇ ಸುಮಲತಾ ಅವರ ವಾದವಾಗಿದೆ ಎಂದು ಪೌರಾಡಳಿತ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು(ಎಂ.ಟಿ.ಬಿ) ಹೇಳಿದರು.
ನಗರದಲ್ಲಿ ಬುಧವಾರ ನಡೆದ ಮೇಕ್ಶಿಫ್ಟ್ ಆಸ್ಪತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿನ ಮೈಷುಗರ್ ಸಕ್ಕರೆ ಕಾರ್ಖಾನೆ ನಷ್ಟಕ್ಕೆ ತುತ್ತಾಗಿ ಬಂದ್ ಮಾಡಲಾಗಿದೆ.
ಸರ್ಕಾರ 40 ವರ್ಷ ಖಾಸಗಿಯವರಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. ಆದರೆ ಮೈಷುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರೈತರು ಮತ್ತು ಹೋರಾಟಗಾರರ ವಿರೋಧವಿದೆ. ರೈತರಿಗೆ ಅನುಕೂಲವಾಗಬೇಕು ಎನ್ನುವ ದೃಷ್ಠಿಯಿಂದ ಮೈಷುಗರ್ ಕಾರ್ಖಾನೆ ಖಾಸಗೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಸಭೆ ನಡೆಸಲಾಗಿದೆ.
ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲು 10 ರಿಂದ 15 ಕಿ.ಮೀ ದೂರ ಹೋಗಬೇಕು. ಇದರಿಂದ ರೈತರಿಗೆ ಸಾಗಾಣಿಕೆಯೇ ದೊಡ್ಡ ಹೊರೆಯಾಗಲಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಚರ್ಚೆ ನಡೆಸಿ, ಸಮಸ್ಯೆ ಇತ್ಯರ್ಥ ಮಾಡುವಂತೆ ಮನವಿ ಮಾಡಲಾಗಿದೆ. ಈಗಾಗಲೇ ರೈತರು, ಹೋರಾಟಗಾರರು ಮತ್ತು ಸಂಘಟನೆಗಳು ಖಾಸಗೀಕರಣ ವಿರೋಧಿಸಿ ಹೋರಾಟ ನಡೆಸಿದ್ದಾರೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..