ಬೆಂ.ಗ್ರಾ.ಜಿಲ್ಲೆ: ಪ್ರಸಕ್ತ ವರ್ಷದ ಜಲಶಕ್ತಿ ಅಭಿಯಾನದ ನೂರು ದಿನದ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಕೆರೆ, ಕುಂಟೆ, ಕಲ್ಯಾಣಿಗಳಲ್ಲಿ ಹೂಳೆತ್ತುವುದು ಹಾಗೂ ಸ್ವಚ್ಛತೆಯನ್ನು ಮಾಡುವ ಮೂಲಕ ಮಳೆ ನೀರು ಸಂಗ್ರಹವಾಗುವಂತೆ ಮಾಡುವುದರಿಂದ ಅಂತರ್ಜಲ ಅಭಿವೃದ್ಧಿಯಾಗುವ ಜೊತೆಗೆ ಗ್ರಾಮಗಳ ಅಭಿವೃದ್ಧಿಯಾಗುತ್ತದೆ ಆದ್ದರಿಂದ ನರೇಗಾ ಯೋಜನಾ ಸಿಬ್ಬಂದಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಆದೇಶಗಳಿಗೆ ಅನುಸಾರವಾಗಿ ತುರ್ತಾಗಿ ಕೆಲಸಗಳನ್ನು ನಿರ್ವಹಿಸಬೇಕು ಎಂದು ಸೂಚಿಸಿದ ಅವರು ನರೇಗಾ ಯೋಜನೆಯಡಿ ಬರುವಂತಹ ಕಾಮಗಾರಿಗಳಾದ ಕೆರೆ, ಕುಂಟೆಗಳಲ್ಲಿ ಹೂಳೆತ್ತುವುದು, ಬದು, ಚರಂಡಿ, ಕೃಷಿ ಹೊಂಡ ನಿರ್ಮಾಣ, ಗ್ರಾಮೀಣ ರಸ್ತೆ ಹಾಗೂ ಇತರೆ ಕಾಮಗಾರಿಗಳನ್ನು ಜವಾಬ್ದಾರಿ ವಹಿಸಿ ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರು.
ಎಲ್ಲಾ ಕಾಮಗಾರಿಗಳಿಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲು ಸಾಧ್ಯವಿಲ್ಲವಾದ್ದರಿಂದ ಕಾಳಜಿಯಿಂದ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸಿದರೆ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದಂತಾಗುತ್ತದೆ ಎಂದು ತಿಳಿಸಿದರು.
ಎಲ್ಲರೂ ಪ್ರತಿದಿನ ಸರಿಯಾದ ಸಮಯಕ್ಕೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಹಾಜರಿರಬೇಕು ಹಾಗೂ ಕ್ರಿಯಾ ಯೋಜನೆಯ ಅನುಸಾರವಾಗಿಯೇ ಕೆಲಸ ನಿರ್ವಹಿಸಬೇಕು ಎಂದರಲ್ಲದೆ, ಸ್ಥಳೀಯವಾಗಿ ಯಾವುದೇ ಸಮಸ್ಯೆಗಳಿದ್ದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಸಕ್ತ ವರ್ಷ ನರೇಗಾ ಯೋಜನೆಯಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು ಎಂದ ಅವರು ಯಾವುದೇ ಹಳೆಯ ಕಾಮಗಾರಿಗಳು ಬಾಕಿ ಇದ್ದಲ್ಲಿ ಶೀಘ್ರವೇ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ, ಮೇ.ಇನ್‍ವೆನ್‍ಸಿಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‍ನ ಹಿರಿಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..