ದೊಡ್ಡಬಳ್ಳಾಪುರ: ಅಕ್ರಮ ಗೋ ಸಾಗಾಣಿಕೆ, ಸರಗಳ್ಳತನ ಮತ್ತಿತರ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸರು ತಾಲೂಕಿನ ವಿವಿಧೆಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆ ತೀವ್ರಗೊಳಿಸಿದ್ದಾರೆ.

ಈ ಕುರಿತು ಹರಿತಲೇಖನಿಗೆ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಮಾಹಿತಿ ನೀಡಿದ್ದು, ಸರಗಳ್ಳತನ, ಅಕ್ರಮ ಗೋ ಸಾಗಾಣಿಕೆ ಸೇರಿದಂತೆ ಎಲ್ಲಾ ತರಹದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ತಾಲೂಕಿನ ನಾಲ್ಕು ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ಗೌರಿಬಿದನೂರಿನ ಕಡೆಯಿಂದ ಬರುವ ವಾಹನ ತಪಾಸಣೆಗೆ ಗುಂಜೂರು ಬಳಿ, ಅಲಿಪುರ, ಹೊಸೂರು, ಮಧುಗಿರಿ ಕಡೆಯಿಂದ ಬರುವ ವಾಹನಗಳ ತಪಾಸಣೆಗೆ ಆರೂಢಿಯಲ್ಲಿ. ನೆಲಮಂಗಲ ಕಡೆಯ ವಾಹನಗಳ ತಪಾಸಣೆಗೆ ಕನಸವಾಡಿ ಬಳಿ ಹಾಗೂ ಬೆಂಗಳೂರು ಕಡೆಯಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲು ಮಾರಸಂದ್ರ ಬಳಿ ಚೆಕ್ ಪೋಸ್ಟ್ ಸ್ಥಾಪಿಸಿ ನಿರಂತರವಾಗಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಈ ಚೆಕ್ ಪೋಸ್ಟ್ ದಿನದ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಲಿದ್ದು, ಪೊಲೀಸರು ಅನುಮಾನಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಲಿದ್ದಾರೆ.
ಜಿಲ್ಲೆಯಲ್ಲಿ ಸರಣಿ ಸರಗಳ್ಳತನ ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಲಾಕ್‍ಡೌನ್ ತೆರವಿನ ನಂತರ ಅನ್ಯ ರಾಜ್ಯದ ಕಳ್ಳರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಶಂಕಿಸಲಾಗಿದೆ. ಈ ನಿಟ್ಟಿನಲ್ಲಿ ಅವರ ಬಂಧನಕ್ಕೆ ಇಲಾಖೆ ಕ್ರಮಕೈಗೊಂಡಿದೆ.
ಅಪರಾಧ ಪ್ರಕರಣಗಳ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಹಾಲಿನ ಡೈರಿ, ಪಡಿತರ ಅಂಗಡಿ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದ್ದು, ಒಡವೆಗಳನ್ನು ಧರಿಸಿಕೊಂಡು ಒಂಟಿಯಾಗಿ ಓಡಾಡದೆ ಅಪರಾಧ ತಡೆಗೆ ಪೊಲೀಸರೊಂದಿಗೆ ಕೈ ಜೋಡಿಸಬೇಕೆಂದು ನವೀನ್ ಕುಮಾರ್ ಮನವಿ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..