ದೊಡ್ಡಬಳ್ಳಾಪುರ: ಕರೊನಾ ಹಿನ್ನಲೆಯಲ್ಲಿ ಅವಧಿ ಮುಗಿದಿರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ, ನಗರಸಭೆ ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಡಿಸೆಂಬರ್ ವರಗೆ ನಡೆಸದಿರಲು ರಾಜ್ಯ ಸರ್ಕಾರ ಸೂಚಿಸಿದೆ. ಈ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಸಹ ಮುಂದೂಡಲಾಗಿದ್ದು ಚುನಾವಣೆ ಅಗತ್ಯತೆ ಬಗ್ಗೆ ಒತ್ತಡಗಳ ಕೇಳಿ ಬರುತ್ತಿವೆ.
ಅವಧಿ ಮುಕ್ತಾಯವಾಗಿ ಎರಡು ವರ್ಷ: ಐದು ವರ್ಷಗಳ ಅವಧಿಯ ನಗರಸಭೆ ಸದಸ್ಯರ ಅಧಿಕಾರ ಅವಧಿ 2019ರ ಮಾ.12ರ ಸಂಜೆ ಮುಕ್ತಾಯವಾಗಿ, ನಗರಸಭೆ ಈಗ ಆಡಳಿತಾಧಿಕಾರಿಗಳ ಸುಬರ್ದಿನಲ್ಲಿದೆ. 2 ವರ್ಷ 3 ತಿಂಗಳಾಗಿದ್ದರೂ ಇನ್ನೂ ಚುನಾವಣೆ ಭಾಗ್ಯವಿಲ್ಲ. ಈಗ ನಗರಸಭೆ ಚುನಾವಣೆ ಮುಂದೂಡಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹೊಂದಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.
ವಾರ್ಡ್ ಮೀಸಲಾತಿ ತಕರಾರು: ವಾರ್ಡ್‍ಗಳ ಗಡಿ ನಿಗದಿ, ವಾರ್ಡ್‍ಗಳ ಮೀಸಲಾತಿ ಅಂತಿಮಗೊಳಿಸಿದ್ದರೂ ಸಹ ಇದು ಸರಿ ಇಲ್ಲ ಎನ್ನುವುದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆಹೋದ ಕಾರಣದಿಂದಾಗಿ ನಗರಸಭಾ ಚುನಾವಣೆ ವಿಳಂಬವಾಗುತ್ತಲೇ ಬರುತ್ತಿದೆ. ಮೂರು ತಿಂಗಳ ಹಿಂದೆಯಷ್ಟೇ ನ್ಯಾಯಾಲಯದ ಆದೇಶದಂತೆ ವಾರ್ಡ್‍ಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಚುನಾವಣೆ ದಿನಾಂಕ ಘೋಷಣೆಯಾಗುವ ಹಂತದಲ್ಲಿ ಇರುವಾಗಲೇ ಮತ್ತೊಮ್ಮೆ ವಾರ್ಡ್‍ಗಳ ಮೀಸಲಾತಿ ನಿಗದಿಯನ್ನು ಪ್ರಶ್ನಿಸಿ ಜಿ.ಎಸ್.ಸೋಮರುದ್ರ ಶರ್ಮ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಇದೆಲ್ಲವು ಇತ್ಯರ್ಥವಾಗಿ ಚುನಾವಣಾ ದಿನಾಂಕ ಪ್ರಕಟವಾಗುತ್ತದೆ ಎನ್ನುವಷ್ಟರಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಜಾರಿಗೆ ಬಂತು. ಇದರ ಬೆನ್ನಲ್ಲೆ ಸರ್ಕಾರದ ಆದೇಶ ಹೊರಬಿದ್ದಿರುವುದು ಚುನಾವಣೆಗಾಗಿ ಸಂಘಟನೆಯಲ್ಲಿ ನಿರತರಾಗಿದ್ದ ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ.
ಈ ನಡುವೆ ಸರ್ಕಾರ ಹಾಗೂ ವಾರ್ಡ್ ಮೀಸಲಾತಿ ತಕರಾರು ಸಲ್ಲಿಸಿರುವ ಅರ್ಜಿದಾರರ ವಿಚಾರಣೆಗಳು ವಿಳಂಬವಾಗುತ್ತಿದೆ. ಸರ್ಕಾರದ ಪರವಾಗಿ ಸರಿಯಾಗಿ ತಮ್ಮ ನಿಲುವು ಸಮರ್ಥಿಸುವ ಕಡೆ ಗಮನ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು, ವಿಚಾರಣೆ ತ್ವರಿತವಾಗಿ ನಡೆದು ತೀರ್ಪು ಹೊರಬೀಳಬೇಕಿದೆ ಎನ್ನುವುದು ರಾಜಕೀಯ ಮುಖಂಡರ ಅಭಿಪ್ರಾಯವಾಗಿದೆ.
ಉದ್ಘಾಟನೆಗೆ ಕಾಯುತ್ತಿದೆ ಹೊಸ ಕಾರ್ಯಾಲಯ: ನಗರಸಭೆಯ ಆವರಣದಲ್ಲಿ 4.5 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನಗರಸಭೆಯ ಕಾರ್ಯಾಲಯ ಬಹುತೇಕ ಪೂರ್ಣವಾಗಿದೆ. ಆದರೆ ಇದಕ್ಕೆ ಇನ್ನೂ ಉದ್ಘಾಟನಾ ಭಾಗ್ಯವಿಲ್ಲ. ಎಲ್ಲಾ ಸರಿಯಾಗಿದ್ದರೆ ಕಟ್ಟಡ ಉದ್ಘಾಟನೆಯಾಗಬೇಕಿತ್ತು. ಡಿಸೆಂಬರ್ ನಂತರ ಚುನಾವಣೆ ನಡೆದರೆ ಮಾರ್ಚ್ ವೇಳೆಗೆ ನಗರಸಭೆ ಅವಧಿ ಮುಗಿದು 3 ವರ್ಷವಾಗುತ್ತದೆ. ಮುಂದಿನ ನೂತನ ನಗರಸಭಾ ಸದಸ್ಯರು ಹೊಸ ಕಟ್ಟಡದಲ್ಲಿಯೇ ತಮ್ಮ ಸಭೆಗಳನ್ನು ನಡೆಸಬಹುದಾಗಿದೆ.
ನಗರಸಭೆ ಚುನಾವಣೆ ನಡೆಸುವುದು ಸೂಕ್ತವಾಗಿದ್ದು, ನ್ಯಾಯಾಲಯದಲ್ಲಿರುವ ಆಕ್ಷೇಪಣೆಗಳು ಶೀಘ್ರ ಬಗೆಹರಿದು ಚುನಾವಣೆ ಶೀಘ್ರ ಪ್ರಕಟವಾಗಲಿ ಎಂದು ರಾಜಕೀಯ ಮುಖಂಡರ ಹಾಗೂ ನಾಗರಿಕರ ಅಭಿಪ್ರಾಯವಾಗಿದೆ.
ನಗರಸಭೆಯ ವಾರ್ಡ್‍ಗಳ ಗಡಿ ನಿಗದಿ, ವಾರ್ಡ್‍ಗಳ ಮೀಸಲಾತಿ ಅಂತಿಮಗೊಳಿಸಲಾಗಿದ್ದರೂ, ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ, ಪ್ರಕರಣ ಇತ್ಯರ್ಥವಾದ ನಂತರ ನಿಯಮಾನುಸಾರ ಚುನಾವಣೆ ನಡೆಯಲಿದೆ. ನಗರಸಭೆ ಕಾರ್ಯಾಲಯದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಒಳಾಂಗಣದ ಕಾಮಗಾರಿಗಳು ಬಾಕಿ ಇವೆ: ರಮೇಶ್.ಎಸ್.ಸುಣಗಾರ್ ಪೌರಾಯುಕ್ತ, ನಗರಸಭೆ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..