ಚಿಕ್ಕಬಳ್ಳಾಪುರ: ಪರಿಸರ ಸಂರಕ್ಷಣೆ, ವಾಹನ ದಟ್ಟಣೆ ಹಾಗೂ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಜುಲೈ 19 ರಿಂದ ನಂದಿಬೆಟ್ಟದ ವಾಹನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಸಾಮಥ್ಯಕ್ಕನುಗುಣವಾಗಿ ಪ್ರವಾಸಿಗರ ಬೇಟಿಗೆ ಅವಕಾಶ ನೀಡಲಾಗುವುದು. ಸಪ್ತಗಿರಿಗಳ ಧಾಮ, ಸಪ್ತ ನದಿಗಳ ಉಗಮ ಸ್ಥಾನವಾದ ನಂದಿಬೆಟ್ಟವನ್ನು ವೀಕ್ಷಿಸಲು ಜಿಲ್ಲಾಡಳಿತ ರೂಪಿಸಲಿರುವ ನೂತನ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ -19 ಲಾಕ್ ಡೌನ್ ಪ್ರಯುಕ್ತ ಏಪ್ರಿಲ್ 27 ರಿಂದ ಜಾರಿಯಲ್ಲಿದ್ದ ನಿರ್ಬಂಧವನ್ನು ತೆರೆವುಗೊಳಿಸಿ ಜೂನ್ 21 ರಿಂದ ನಂದಿಬೆಟ್ಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ಜುಲೈ 10 ರಂದು 2858 ಮತ್ತು ಜುಲೈ 11 ರಂಧು 4895 ಪ್ರವಾಸಿಗರು ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ಜನಸಂದಣಿ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ ಜುಲೈ 7 ರಂದು ವಾರಾಂತ್ಯದ ಪ್ರವಾಸಿಗರ ಭೇಟಿಯನ್ನು ನಿಷೇಧಿಸಿತ್ತು.
ಬಡವರ ಊಟಿ ಎಂದೇ ಹೆಸರುವಾಸಿಯಾದ ನಂದಿಬೆಟ್ಟವೂ ಬೆಂಗಳೂರು ರಾಜ್ಯಧಾನಿಗೆ ತುಂಬಾ ಹತ್ತಿರವಿರುದರಿಂದ ಹೆಚ್ಚೆಚ್ಚು ಪ್ರವಾಸಿಗರು ನಂದಿಬೆಟ್ಟಕ್ಕೆ ಭೇಟಿ ನೀಡುವುದನ್ನು ಮನಗಂಡ ಜಿಲ್ಲಾಡಳಿತ ನಂದಿಬೆಟ್ಟದ ಮೇಲೆ ಮುಂದಾಗಬಹುದಾದ ಜನಸಂದಣಿಯನ್ನು ತಡೆಗಟ್ಟಿ ಸುರಕ್ಷಿತವಾಗಿ ಪ್ರವಾಸಿಗರು ಬಂದು ಹೋಗಲು ವೈಜ್ಞಾನಿಕವಾಗಿ ವ್ಯವಸ್ಥಿತ ಯೋಜನೆಯನ್ನು ರೂಪಿಸುವ ಉದ್ದೇಶ ಹೊಂದಿದೆ. ಈ ಹಿನ್ನಲೆಯಲ್ಲಿ ಜುಲೈ 19 ರಿಂದ ವಾಹನ ನಿಲುಗಡೆಗೆ ಅವಕಾಶವಿರುವಷ್ಟು ಮಂದಿಯನ್ನು ಮಾತ್ರ ಪ್ರವೇಶ ಪಾಸ್ ಅನ್ನು ನೀಡಿ ನಂದಿಬೆಟ್ಟಕ್ಕೆ ಭೇಟಿ ನೀಡಲು ಯೋಜಿಸಲಾಗಿದೆ. ಅದಕ್ಕೆ ಪ್ರವಾಸಿಗರು ಸಹಕರಿಸಬೇಕು. ಆರಂಭದಲ್ಲಿ ಈ ಪ್ರಕ್ರಿಯೆಯು ಒಂದೆರಡು ವಾರ ಭೌತಿಕವಾಗಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆನ್ ಲೈನ್ ಮೂಲಕ ನಿರ್ವಹಿಸಲಾಗುವುದು ಎಂದರು.
ಶೇಕಡಾ 50% ರಷ್ಟು ಪಾಸ್ ಗಳನ್ನು ಆನ್ ಲೈನ್ ನಲ್ಲಿ ಶೇಕಡಾ 50% ಪಾಸ್ ಗಳನ್ನು ಬೆಟ್ಟಕ್ಕೆ ಪ್ರವೇಶಿಸುವ ಮುಖ್ಯದ್ವಾರದಲ್ಲಿ ನೀಡಲಾಗುತ್ತದೆ. ಸಾರ್ವಜನಿಕರು ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಿ ಪಾಸ್ ಪಡೆಯಬೇಕು. ಆರಂಭದಲ್ಲಿ ತುಸು ಗೊಂದಲವಾದರೂ ಸಹ ಮುಂದಿನ ದಿನಗಳಲ್ಲಿ ಈ ರೀತಿಯ ವ್ಯವಸ್ಥಿತ ವೀಕ್ಷಣೆಯಿಂದ ಪ್ರವಾಸಿತಾಣವನ್ನು ವೈಜ್ಞಾನಿಕವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅನುಕೂಲವಾಗಲಿದೆ ಎಂದರು.
ಪ್ರಸ್ತುತ ನಂದಿಗಿರಿಧಾಮದ ಮೇಲಿರುವ ವಾಹನ ನಿಲ್ದಾಣದಲ್ಲಿ ಪ್ರಸ್ತುತ 310 ಕಾರು, 550 ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಿದ್ದು, ಬೆಟ್ಟದ ಕೆಳಭಾಗದಲ್ಲಿ 350 ಕಾರು ಹಾಗೂ 200 ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಬಹುದಾಗಿದೆ. ಈ ನಿಲುಗಡೆಯಲ್ಲಿ ಪಾರ್ಕ್ ಮಾಡಲು ವ್ಯವಸ್ಥೆ ಇರುವ ವಾಹನಗಳಲ್ಲಿನ ಪ್ರವಾಸಿಗರಿಗೆ ಮಾತ್ರ ಪಾಸ್ ವಿತರಿಸಿ ನಂದಿಬೆಟ್ಟ ವೀಕ್ಷಿಸಲು ಅನುಮತಿ ನೀಡಲಾಗುವುದು. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅವರ ನಿರ್ದೇಶನದಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ನಂದಿ ಪ್ರವಾಸ ತಾಣವನ್ನು ಸಂರಕ್ಷಿಸುವ ಜೊತೆಗೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಇದಲ್ಲದೆ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಹಯೋಗದೊಂದಿಗೆ 7 ಎಕರೆ ಜಮೀನು ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಿ ಅಲ್ಲಿಂದ ಬಸ್ಗಳ ಮೂಲಕ ಪ್ರವಾಸಿರನ್ನು ನಂದಿಗಿರಿಧಾಮಕ್ಕೆ ಕರೆದೊಯ್ಯಲು ನೂತನ ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ಪರಿಸರ ಸಂರಕ್ಷಣೆ ಮಾಡುವುದರೊಂದಿಗೆ ವಾಹನ ದಟ್ಟಣೆ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಶಾಶ್ವತ ಪರಿಹಾರವಾಗಲಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಜುಲೈ 14 ರಿಂದಲೇ ಹಲವು ನೂತನ ಕ್ರಮಗಳನ್ನು ಕೈಗೊಂಡಿದೆ ಎಂದರು.
ರೋಪ್ ವೇ ನಿರ್ಮಾಣಕ್ಕೆ ಅಗತ್ಯಕ್ರಮ: ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ ಸಂಬಂಧ ಸರ್ಕಾರಿ ಸಂಸ್ಥೆಯಾದ ಮೇ 11 ಐಡೆಕ್ ಸಂಸ್ಥೆ ಹಾಗೂ ಖಾಸಗಿ ಸಂಸ್ಥೆಯಾದ ಬಾಂಬೆ ರೋಪ್ ವೇ ಸಂಸ್ಥೆಯಿಂದ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಈಗಾಗಲೇ ಮಣ್ಣಿನ ಗುಣಮಟ್ಟ ಪರೀಕ್ಷೆ, ಸ್ಥಳೀಯ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಹಾಗೂ ಡ್ರೋಣ್ ಸರ್ವೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೋಪ್ ವೇ ಆದಂತಹ ಸಂದರ್ಭದಲ್ಲಿಯೂ ಸಹ ಈಗ ನಿರ್ಮಿಸುತ್ತಿರುವ ಪಾರ್ಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ನಂದಿಗಿರಿ ಪ್ರವಾಸವನ್ನು ಸ್ವಲ್ಪ ದಿನ ಮುಂದೂಡಿ: ಜುಲೈ 19 ರಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುವ ಹಿನ್ನಲೆಯಲ್ಲಿ ಹೊಸ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗುವವರೆಗೆ ಹಾಗೂ ವಾರಾಂತ್ಯದಲ್ಲಿ ಪ್ರವಾಸಿಗರು ನಂದಿಬೆಟ್ಟ ಪ್ರವೇಶವನ್ನು ಸ್ವಲ್ಪದಿನಗಳ ಮಟ್ಟಿಗೆ ಮುಂದೂಡಿ, ಬೆಳಗಿನ ಜಾವ ಕಾಯುವಂತದ್ದು, ಜನಸಂದಣಿ, ವಾಹನದಟ್ಟಣೆ ಮಾಡುವಂತದ್ದನ್ನು ಮಾಡಬೇಡಿ. ಪಾಸ್ ಸಿಕ್ಕಿದವರು ಮಾತ್ರವೇ ನಂದಿಬೆಟ್ಟ ಪ್ರವೇಶ ಮಾಡಿ ಇನ್ಮೇಲೆ ವಾಹನಗಳಿಗೂ ಮತ್ತು ಪ್ರವಾಸಿಗರಿಗೂ ಪ್ರತ್ಯೇಕವಾಗಿ ಪಾಸ್ ನೀಡಲಾಗುವುದು. ಭೇಟಿ ನೀಡಿದ ಪ್ರವಾಸಿಗರು ಪಾಸ್ ಗಳನ್ನು ಹಿಂತಿರುಗಿಸಬೇಕು. ಈ ಪ್ರಕ್ರಿಯೇ ಚಕ್ರದ ರೀತಿಯಲ್ಲಿ ನಿರಂತರವಾಗಿ ನಡೆಯಲಿದೆ. ಈ ವ್ಯವಸ್ಥೆಯು ಸ್ವಲ್ಪ ದಿನದ ಮಟ್ಟಿಗೆ ಭೌತಿಕವಾಗಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಅಭಿವೃದ್ಧಿಪಡಿಸಿ ಆನ್ ಲೈನ್ ನಲ್ಲಿ ಶೇಕಡಾ 50% ಮತ್ತು ಭೌತಿಕವಾಗಿ ಶೇ.50 ರಷ್ಟು ಪಾಸ್ ಗಳನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿ ಗೋಪಾಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಿತೇಂದ್ರನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….