ದಾವಣಗೆರೆ: ಕೋವಿಡ್-19 ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ, ಈಗಾಗಲೆ 3ನೇ ಅಲೆ ಶೀಘ್ರದಲ್ಲೇ ಆತಂಕ ಸೃಷ್ಟಿಸುವ ಸಂಭವವಿದ್ದು, ಸಾರ್ವಜನಿಕರು ಮೈಮರೆತು ಕೋವಿಡ್‍ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದಾರೆ. ಹೀಗಾಗಿ ನಿಯಮ ಗಾಳಿಗೆ ತೂರಿ ಬೇಜವಾಬ್ದಾರಿಯಾಗಿ ವರ್ತಿಸುವ ಸಾರ್ವಜನಿಕರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಸಹಾಯಕರಾಗಿ ಕನಿಷ್ಟ 04 ಗಂಟೆ ಸೇವೆ ಸಲ್ಲಿಸುವ ಶಿಕ್ಷೆ ನೀಡುವ ವ್ಯವಸ್ಥೆ ಜಾರಿಗೊಳಿಸಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಕೋವಿಡ್‍ನ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ ವೈದ್ಯಕೀಯ ತಜ್ಞರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಲಹಾ ಸಮಿತಿಯ ಸದಸ್ಯರುಗಳಾದ ತಜ್ಞ ವೈದ್ಯರುಗಳು ಕೋವಿಡ್ 2ನೇ ಅಲೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಟ 1349 ಪ್ರಕರಣ ಒಂದೇ ದಿನ ವರದಿಯಾಗಿತ್ತು. ಈ ಪ್ರಮಾಣಕ್ಕೆ ಹೋಲಿಸಿದಾಗ 3ನೇ ಅಲೆ ಸಂದರ್ಭದಲ್ಲಿ ದಿನವೊಂದಕ್ಕೆ ಗರಿಷ್ಟ 2200 ಪ್ರಕರಣ ವರದಿಯಾಗುವ ಸಂಭವವಿದೆ. ಇದರಲ್ಲಿ ಶೇ. 10 ರಷ್ಟು ಸೋಂಕಿತರಿಗೆ ಆಸ್ಪತ್ರೆಗೆ ದಾಖಲಿಸಬೇಕಾಗಬಹುದು, ಅಲ್ಲದೆ ತೀವ್ರವಲ್ಲದ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಬೇಕಾಗುತ್ತದೆ.
ಜಿಲ್ಲೆಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಮಾರುಕಟ್ಟೆ, ಕಲ್ಯಾಣ ಮಂಟಪ, ಮಾಲ್, ಪ್ರವಾಸಿ ತಾಣಗಳು, ಹೋಟೆಲ್ ಮುಂತಾದೆಡೆ ಜನಸಂದಣಿ ಹೆಚ್ಚಾಗಿರುವುದು ಕಂಡುಬರುತ್ತಿದೆ. ಹೀಗಾಗಿ 3ನೇ ಅಲೆ ಅವಧಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್‍ನ ಪರಿಸ್ಥಿತಿ ತೀರಾ ಗಂಭೀರಕ್ಕೆ ತಲುಪುವ ಎಲ್ಲ ಸಾಧ್ಯತೆಗಳೂ ಇವೆ. ಕೋವಿಡ್ ಸೋಂಕು ತಡೆಗಟ್ಟಲು ಇರುವ ಒಂದೇ ದಾರಿ ಎಂದರೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು. ಕೋವಿಡ್ ಸೋಂಕಿತರಿಗೆ ಪಿಪಿಇ ಕಿಟ್ ಧರಿಸಿ, ಜೀವದ ಹಂಗು ತೊರೆದು ಚಿಕಿತ್ಸೆ ನೀಡುವುದು ಅಷ್ಟು ಸುಲಭ ಕೆಲಸವಲ್ಲ. ಇದನ್ನು ಅರ್ಥ ಮಾಡಿಕೊಳ್ಳದ ಸಾರ್ವಜನಿಕರು ತಾವಾಗಿಯೇ ಅಪಾಯಕ್ಕೆ ಆಹ್ವಾನ ನೀಡುವುದಲ್ಲದೆ, ಇತರರ ಆರೋಗ್ಯಕ್ಕೂ ಕಂಟಕ ತರುತ್ತಿದ್ದಾರೆ. ಇದನ್ನು ತಡೆಗಟ್ಟಲು ವಿನೂತನ ಶಿಕ್ಷೆ ವಿಧಿಸುವುದೇ ಸರಿಯಾದ ಕ್ರಮ. ಮಾಸ್ಕ್ ಧರಿಸದವರು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಹಾಗೂ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಉಲ್ಲಂಘಿಸುವವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿ, ಸಹಾಯಕರಾಗಿ ಕನಿಷ್ಟ 4 ಗಂಟೆ ಸೇವೆ ಸಲ್ಲಿಸುವ ಶಿಕ್ಷೆ ವಿಧಿಸುವುದು ಸೂಕ್ತ. ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು ಜೀವದ ಹಂಗು ತೊರೆದು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾರೆ ಎಂಬ ಅರಿವು ಅವರಿಗೂ ಬರಲಿ, ಎಂದು ಸಲಹಾ ಸಮಿತಿಯ ಸದಸ್ಯರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಬಡವರು, ವ್ಯಾಪಾರಿಗಳು, ಕೂಲಿಕಾರರು ಆರ್ಥಿಕ ನಷ್ಟ ಅನುಭವಿಸದಿರಲಿ ಎಂದು ಲಾಕ್‍ಡೌನ್ ತೆರವುಗೊಳಿಸಿದೆ. ಇದನ್ನು ಅರ್ಥ ಮಾಡಿಕೊಳ್ಳದ ಜನರು ಮೈಮರೆತು, ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಇದೇ ರೀತಿ ಆದಲ್ಲಿ, ಭೀಕರ ಪರಿಸ್ಥಿತಿ ಕೇವಲ ಎರಡು ತಿಂಗಳ ಒಳಗಾಗಿ ಜಿಲ್ಲೆಗೆ ಬರುವ ಸಾಧ್ಯತೆಗಳಿವೆ. ದಿನಕ್ಕೆ ಗರಿಷ್ಠ 2 ಸಾವಿರ ಪ್ರಕರಣಗಳು ಬರುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಅನುಗುಣವಾಗಿ ಜಿಲ್ಲೆಯಲ್ಲಿ ವೈದ್ಯಕೀಯ ವ್ಯವಸ್ಥೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವ ಸಾರ್ವಜನಿಕರಿಗೆ, ಸಮಾರಂಭಗಳ ಆಯೋಜಕರಿಗೆ, ಅಂಗಡಿಗಳ ಮಾಲೀಕರಿಗೆ ದಂಡ ಹಾಕುವುದರ ಜೊತೆಗೆ ವೈದ್ಯರ ಸಲಹೆಯಂತೆ ಕೋವಿಡ್ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿ, ಸಹಾಯಕರಾಗಿ ಕನಿಷ್ಟ 4 ಗಂಟೆ ಸೇವೆ ಸಲ್ಲಿಸುವ ಶಿಕ್ಷೆ ವಿಧಿಸುವುದನ್ನು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಶೀಘ್ರ ಜಾರಿಗೊಳಿಸಲಾಗುವುದು. ಮಾಲ್, ಕಲ್ಯಾಣಮಂಟಪ, ಸಮಾರಂಭ ಸ್ಥಳಗಳಿಗೆ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇಂತಹ ಸ್ಥಳಗಳಲ್ಲಿ ಇಲಾಖೆಯಿಂದ ಕೋವಿಡ್ ಟೆಸ್ಟ್ ಮಾಡಿಸಲಾಗುವುದು. ಇದರ ವೆಚ್ಚವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದರು. ಪೊಲೀಸ್ ಇಲಾಖೆ ಅಧಿಕಾರಿಗಳು, ಈಗಿನಿಂದಲೇ ನಗರಗಳಲ್ಲಿ ರೌಂಡ್ಸ್ ಹಾಕುವುದನ್ನು ಹೆಚ್ಚಿಸಿ, ಧ್ವನಿವರ್ಧಕದಲ್ಲಿ ಜಾಗೃತಿ ಮೂಡಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.
ಕೆಎಸ್‍ಆರ್‍ಟಿಸಿ, ಎಪಿಎಂಸಿ ನೌಕರರು, ಪೌರಕಾರ್ಮಿಕರು ಸೇರಿದಂತೆ ಸೋಂಕಿಗೆ ತುತ್ತಾಗಬಹುದಾದ ವಲಯದ ಅಧಿಕಾರಿ, ನೌಕರರಿಗೆ ಕೋವಿಡ್ ಟೆಸ್ಟ್ ನಿಯಮಿತವಾಗಿ ಮಾಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಅದರನ್ವಯ ಶೀಘ್ರವೇ ಕೋವಿಡ್ ಟೆಸ್ಟ್ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಹೇಳಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಗಂಡಾಂತರಕ್ಕೆ ಒಳಪಡಬಹುದಾದ, ಸೋಂಕಿಗೆ ತುತ್ತಾಗಬಹುದಾದ ಸಮುದಾಯವನ್ನು ಗುರುತಿಸಿ, ಅವರಿಗೆ ತಪ್ಪದೆ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಕೋವಿಡ್ ನೋಡಲ್ ಅಧಿಕಾರಿ ಪ್ರವೀಣ್ ನಾಯಕ್, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಶ್ರೀಧರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರುಗಳು, ಸಲಹಾ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..