ಬೆಂಗಳೂರು: ಇಸ್ರೇಲ್ ಮಾದರಿ ಕೃಷಿ ಬಳಕೆ ನಿಟ್ಟಿನಲ್ಲಿ ಇಸ್ರೇಲ್ ದೇಶದ ದಕ್ಷಿಣ ಭಾರತದ ಕಾನ್ಸುಲೇಟ್ ಜನರಲ್ ಜೊನಾಥನ್ ಜಡ್ಕಾ ಅವರನ್ನು ತಾವು ಸಂಪರ್ಕಿಸಿದ್ದು, ಶೀಘ್ರದಲ್ಲಿಯೆ ಅವರ ನೇತೃತ್ವದ ತಂಡ ರಾಜ್ಯಕ್ಕೆ ಬಂದು ಅಧ್ಯಯನ ಮಾಡಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್.ನಿರಾಣಿ ಅವರು ತಿಳಿಸಿದರು.
ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿರುವ ಹಾನಿ ಮತ್ತು ಕೈಗೊಂಡ ಪರಿಹಾರ ಕ್ರಮಗಳು ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕಲಬುರಗಿ ವಿಜನ್-2050 ಭಾಗವಾಗಿ ಕಲಬುರಗಿ ಜಿಲ್ಲೆಯ ಮಣ್ಣಿನ ಗುಣಮಟ್ಟ, ಇಲ್ಲಿನ ಹವಾಗುಣ ಮತ್ತು ನೀರಿನ ಲಭ್ಯತೆ ಕುರಿತು ಅಧ್ಯಯನ ಮಾಡಿ ಅಗತ್ಯ ಸಲಹೆ ನೀಡಲು ಕಾನ್ಸುಲೇಟ್ ಜನರಲ್ ಜೊನಾಥನ್ ಜಡ್ಕಾ ಅವರನ್ನು ಸಂಪರ್ಕಿಸಿದಾಗ ಅವರು ರಾಜ್ಯಕ್ಕೆ ತಾವೇ ಖುದ್ದಾಗಿ ಬರಲು ಉತ್ಸುಕರಾಗಿದ್ದಾರೆ. ಹೀಗಾಗಿ ಅವರ ಪ್ರವಾಸದ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅವರೊಂದಿಗೆ ಸಂಚರಿಸಿ ಅಧ್ಯಯನಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಮುರುಗೇಶ ನಿರಾಣಿ ನಿರ್ದೇಶಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ 2 ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮತ್ತು ನಗರ ಪ್ರದೇಶದಲ್ಲಿ 1 ಲಕ್ಷ ಸೇರಿದಂತೆ ರಾಜ್ಯದಾದ್ಯಂತ ವಿವಿಧ ವಸತಿ ಯೋಜನೆ ಅಡಿಯಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿಸಿ ಸೂರಿಲ್ಲದವರಿಗೆ ಸೂರು ಕಲ್ಪಿಸುವ ನಿರ್ಧಾರ ಕೈಗೊಂಡಿದೆ ಎಂದರು.
ಆಗಸ್ಟ್‌ನಲ್ಲಿ ವಿಜನ್-2050 ಕಾರ್ಯಾಗಾರ: ಕಲಬುರಗಿ ವಿಜನ್-2050 ಕುರಿತಂತೆ ವಿವಿಧ ಕ್ಷೇತ್ರ ತಜ್ಞರನ್ನು ಆಹ್ವಾನಿಸಿ ಸಲಹೆ ಪಡೆಯಲು ಒಂದು ದಿನದ ಕಾರ್ಯಾಗಾರ ಆಗಸ್ಟ್ ಮಾಹೆಯಲ್ಲಿ ಏರ್ಪಡಿಸಲಾಗುವುದು. ವಿಜನ್ ಡಾಕ್ಯೂಮೆಂಟ್ ಸಿದ್ಧಪಡಿಕೆಗೆ ಗ್ಲೋಬಲ್ ಕನ್ಸಲಟೆಂಟ್ ಗುರುತಿಸಿ ಅವರ ಮುಖೇನ ಡಿ.ಪಿ.ಆರ್. ಸಿದ್ಧಪಡಿಸುವುದು ಮತ್ತು ಅದಕ್ಕನುಗುಣವಾಗಿ ಹಣಕಾಸು ಹೊಂದಾಣಿಕೆಗೂ ಚಿಂತನೆ ನಡೆಸಲಾಗುವುದು ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಹೂಡಿಕೆ, ರಸ್ತೆ ಸುಧಾರಣೆ, ಉದ್ಯೋಗ ಸೃಷ್ಠಿ, ಶಿಕ್ಷಣ ಕ್ಷೇತ್ರ ಸುಧಾರಣೆ, ಸರಕು ಸಾಗಣಿಕೆಗೆ ಬ್ರಾಡ್ ಗೇಜ್ ರೈಲು ಓಡಾಟ ಹೀಗೆ ನಾನಾ ವಿಷಯಗಳನ್ನು ಹಂತ-ಹಂತವಾಗಿ ಅಭಿವೃದ್ಧಿಗೆ ಪಡಿಸುವ ಗುರಿ ವಿಜನ್-2050 ಹೊಂದಿದೆ ಎಂದು ಕನಸಿನ ಕಲಬುರಗಿ ಕುರಿತು ಸಚಿವ ಮುರುಗೇಶ ನಿರಾಣಿ ವಿವರಿಸಿದರು.
371(ಜೆ) ಲೋಪದೋಷ, ಶೀಘ್ರ ಸಭೆ: ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ 371(ಜೆ) ಅನುಷ್ಠಾನದಲ್ಲಿ ಕೆಲವು ಲೋಪದೋಷಗಳಿವೆ. ಇದನ್ನು ಈಗಲೇ ಸರಿಪಡಿಸಬೇಕಾಗುತ್ತದೆ. ವಿಶೇಷವಾಗಿ ಶಿಕ್ಷಕರ ಟಿ.ಇ.ಟಿ ಅರ್ಹತಾ ಪರೀಕ್ಷೆಯಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾಕ್ರ್ಸ್ ನೀಡಬೇಕೆಂದು ನಮ್ಮ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಲೋಪದೋಷ ಸರಿಪಡಿಸಲು ಕೂಡಲೆ ಸಭೆ ನಡೆಸಬೇಕೆಂದು ಎಂ.ಎಲ್.ಸಿ. ಶಶಿಲ್ ನಮೋಶಿ ಸಭೆಯಲ್ಲಿ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುರುಗೇಶ ನಿರಾಣಿ ಅವರು ಮೊದಲು ಜಿಲ್ಲಾ ಮಟ್ಟದಲ್ಲಿ ಎಲ್ಲಾ ಜನಪ್ರತಿನಿಧಿಗಳೊಂದಿಗೆ ಸಭೆ ಕೈಗೊಂಡು ಎಲ್ಲ ಅಂಶಗಳನ್ನು ಚರ್ಚಿಸಿದ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸೋಣ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ಮಾಹೆಯಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಆದರೆ ಪ್ರವಾಹ ಸ್ಥಿತಿ ಏರ್ಪಟ್ಟಿಲ್ಲ. ಸಾಮಾನ್ಯವಾಗಿ ಪ್ರವಾಹ ಏರ್ಪಡುವ ಪ್ರದೇಶಗಳಾದ 165 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಿ ಸ್ಥಳೀಯ ಯುವಜನರು ಮತ್ತು ಈಜುಗಾರರನ್ನು ಒಳಗೊಂಡಂತೆ 15 ಜನರ ತಂಡ ರಚಿಸಿ ಅವರಿಗೆ ಪ್ರವಾಹ ಕುರಿತಂತೆ ಅಗತ್ಯ ತರಬೇತಿ ನೀಡಲಾಗಿದೆ. ತಾಲೂಕು ಅಧಿಕಾರಿಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಲಾಗಿದೆ. ಬೆಡ್ ಶೀಟ್, ಟವೆಲ್, ಸಾಬೂನು ಮತ್ತು ಅಗತ್ಯ ಪ್ರಮಾಣದ ಉಪಹಾರ ಒಳಗೊಂಡ 200 ಕಿಟ್ ಪ್ರತಿ ತಾಲೂಕಿನಲ್ಲಿ ಸಿದ್ದಪಡಿಸಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರವಾಹ ಏರ್ಪಡುವ ಸ್ಥಳಗಳಲ್ಲಿ ಇರುವ ಗರ್ಭಿಣಿಯರ ಪಟ್ಟಿ ಸಹ ಸಿದ್ಧಪಡಿಸಲಾಗಿದೆ ಎಂದು ಸಚಿವರ ಗಮನಕ್ಕೆ ತಂದ ಅವರು ಪ್ರಸ್ತುತ ಕೋವಿಡ್ ಸ್ಥಿತಿಗತಿ ವಿವರಿಸಿ ಮೂರನೇ ಅಲೆ ಎದುರಿಸಲು ಎಲ್ಲಾ ಸಿದ್ಧತೆ ಕೈಗೊಂಡಿದ್ದು, ಪ್ರತಿ ತಾಲೂಕಿನಲ್ಲಿ 500 ಎಲ್.ಪಿ.ಎಂ. ಆಕ್ಸಿಜನ್ ಜನರೇಷನ್ ಪ್ಲ್ಯಾಂಟ್ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..