ಬೆಂ.ಗ್ರಾ.ಜಿಲ್ಲೆ: ಪಶು ಪಾಲನಾ ಇಲಾಖೆಯು ಆಯೋಜಿಸುವ ತರಬೇತಿ ಶಿಬಿರಗಳಿಂದ ರೈತ ಬಾಂಧವರು ಹೆಚ್ಚಿನ ತಿಳುವಳಿಕೆ ಪಡೆದು, ಅಧಿಕ ಲಾಭ ಗಳಿಸಿ, ಸ್ವಾವಲಂಬಿ ಬದುಕು ಸಾಧಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನಗೌಡ ತಿಳಿಸಿದರು.
ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಸಂಸ್ಥೆಯಲ್ಲಿಂದು ಏರ್ಪಡಿಸಲಾಗಿದ್ದ
ರೈತರ ಆದಾಯ ದ್ವಿಗುಣಗೊಳಿಸಲು, ರೈತರಿಗೆ ಸುಧಾರಿತ ಕುರಿ-ಮೇಕೆ ಸಾಕಾಣಿಕೆ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮುಂದಿನ ದಿನಗಳಲ್ಲಿ ಪಶು ಪಾಲನಾ ಇಲಾಖೆಯ ಸಹಯೋಗದೊಂದಿಗೆ ರೈತರಿಗೆ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಗತ್ಯ ಸಹಕಾರ ನೀಡಲಾಗುವುದು ಎಂದರು.
ತರಬೇತಿಯಲ್ಲಿ ಕುರಿ-ಮೇಕೆ ಸಾಕಾಣಿಕೆಗೆ ಇರುವ ಅವಕಾಶಗಳು, ಸುಧಾರಿತ ನಿರ್ವಹಣೆ ಕ್ರಮಗಳು, ಮಾಂಸ ಮತ್ತು ಮಾಂಸದಿಂದ ತಯಾರಿಸಿದ ಮೌಲ್ಯವರ್ಧಿತ ಖಾದ್ಯ ಪದಾರ್ಥಗಳ ಮಾರಾಟದ ವಿಧಾನಗಳು, ಕುರಿ-ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವಿನ ಕುರಿತು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಗೌ.ಮು.ನಾಗರಾಜ ಅವರು ವಿವರವಾಗಿ ರೈತರಿಗೆ ಮನವರಿಕೆ ಮಾಡಿಕೊಟ್ಟರು.
ರಾಷ್ಟ್ರೀಯ ಪಶುಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ ಬೆಂಗಳೂರು ಸಂಸ್ಥೆಯ ಮುಖ್ಯ ವಿಜ್ಞಾನಿಗಳಾದ ಡಾ.ಎನ್.ಕೆ.ಶಿವಕುಮಾರಗೌಡ ಅವರು ಕುರಿ-ಮೇಕೆಗಳಿಗೆ ನೀಡಬಹುದಾದ ಮೇವಿನ ಬೆಳೆಗಳು ಮತ್ತು ಸಮತೋಲನ ಆಹಾರದ ಕುರಿತು ಉಪನ್ಯಾಸ ನೀಡಿದರು ಹಾಗೂ ಮತ್ತೋರ್ವ ವಿಜ್ಞಾನಿಗಳಾದ ಡಾ.ಆನಂದನ್ ಅವರು ಕುರಿ ಮರಿಗಳ ಪೋಷಣೆ ಹಾಗೂ ಬದಲಿ ಹಾಲಿನ ಮಿಶ್ರಣ(ಮಿಲ್ಕ್ ರಿಪ್ಲೇಸರ್)ದ ಬಳಕೆ ಕುರಿತು ವಿವರಿಸಿದರು.
ತರಬೇತಿಯಲ್ಲಿ ವಿವಿಧ ತಾಲ್ಲೂಕುಗಳ 95 ರೈತರು ಭಾಗವಹಿಸಿ, ಪ್ರಯೋಜನ ಪಡೆದುಕೊಂಡರು.
ತರಬೇತಿಯಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್.ಸಿ.ಎಸ್ ಮತ್ತು ಮುಖ್ಯ ಪಶುವೈದ್ಯಾಧಿಕಾರಿಗಳಾದ(ಆಡಳಿತ) ಡಾ.ಅಂಜಿನಪ್ಪ, ಡಾ.ಮಂಜುನಾಥ್.ಎ.ಕೆ, ಡಾ.ನಾರಾಯಣಸ್ವಾಮಿ.ಸಿ.ಎನ್, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಜಯರಾಮಯ್ಯ, ಡಾ.ದೀಪಕ್ ಹಾಗೂ ಡಾ.ಕುಮಾರಸ್ವಾಮಿ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..