ದೊಡ್ಡಬಳ್ಳಾಪುರ: 2020ನೇ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ತಾಲ್ಲೂಕಿನ ರೈತರಿಗೆ ರೂ2.43 ಲಕ್ಷ ವಿಮಾ ಪರಿಹಾರ ದೊರೆತಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಎನ್.ಸುಶೀಲಮ್ಮ ಹೇಳಿದರು.
2021ನೇ ಸಾಲಿನಲ್ಲಿ ವಿವಿಧ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವಿಮೆ ಮಾಡಿಸುವ ಸಲುವಾಗಿ ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಗುರುವಾರ ಮಾಹಿತಿ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ರೈತರ ಬೆಳೆ ಸುರಕ್ಷತೆಗಾಗಿ ವಿಮಾ ಯೋಜನೆ ಜಾರಿಗೆ ತರಲಾಗಿದೆ.ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಬೆಳೆ ನಷ್ಟ ಉಂಟಾದರೆ ರೈತರಿಗೆ ಆರ್ಥಿಕ ಭದ್ರತೆ ದೊರೆಯಲಿದೆ. ರಾಗಿ ಹಾಗೂ ಮುಸುಕಿನ ಜೋಳ ಬೆಳೆಗೆ ಆ.16ರ ವರೆಗೆ ಬೆಳೆ ವಿಮೆ ಮಾಡಿಸಲು ಅವಕಾಶವಿದೆ. ರಾಗಿ (ಮಳೆಯಾಶ್ರಿತ)ಕ್ಕೆ ರೂ304 ಎಕರೆಗೆ ಹಾಗೂ ಮುಸುಕಿನ ಜೋಳ (ಮಳೆಯಾಶ್ರಿತ) ₹400 ಗಳನ್ನು ಬ್ಯಾಂಕಿನಲ್ಲಿ ಅಥವಾ ಹತ್ತಿರದ ಸಿ.ಎಸ್.ಸಿ ಕೇಂದ್ರದಲ್ಲಿ ಪಾವತಿಸಿ ತಮ್ಮ ಆಧಾರ್ ಕಾರ್ಡ್, ಪಹಣಿ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್ತಕದ ನಕಲು ಪ್ರತಿಗಳನ್ನು ಸಲ್ಲಿಸಬೇಕು ಎಂದರು.
2020ನೇ ಸಾಲಿನಲ್ಲಿ ರಾಗಿ,ಮುಸುಕಿನಜೋಳದ ಬೆಳೆಗೆ 584 ಜನ ರೈತರು ವಿಮೆ ಮಾಡಿಸಿದ್ದರು.ಇದರಲ್ಲಿ 104 ಜನ ರೈತರಿಗೆ ಹಣ ಬಂದಿದೆ. ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡ ರೈತರಿಗೆ ಬಜಾಜ್ ಅಲಿಯನ್ಸ್ ಜೆನೆರಲ್ ಇನ್ಸೂರೆನ್ಸ್ ಕಂಪನಿಯು ರೈತರಿಗೆ ವಿಮಾ ಹಣ ಪಾವತಿ ಮಾಡಲಿದೆ. ರೈತರು ತಾಲ್ಲೂಕಿನ 27 ಸಾಮಾನ್ಯ ಕೇಂದ್ರಗಳಲ್ಲಿ ಎಲ್ಲಿ ಬೇಕಿದ್ದರು ವಿಮಾ ಹಣ ಪಾವತಿ ಮಾಡಿ ನೋಂದಣಿ ಮಾಡಿಸಬಹುದಾಗಿದೆ ಎಂದರು.
ವಿಮಾ ಮಾಹಿತಿ ಕರಪತ್ರ ಬಿಡುಗಡೆಯಲ್ಲಿ ಕೃಷಿಕ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಜಯರಾಮಯ್ಯ,ತಾಂತ್ರಿಕ ಅಧಿಕಾರಿ ಕವಿತಾ ಹೆಗಡೆ, ಕೃಷಿ ಅಧಿಕಾರಿಗಳಾದ ಹರೀಶ್ಕುಮಾರ್, ಸಿದ್ದಲಿಂಗಯ್ಯ, ಗೀತಾ,ನವೀನ್ಕುಮಾರ್, ಕಸ್ತೂರಯ್ಯ, ಸಹಾಯಕ ಕೃಷಿ ಅಧಿಕಾರಿಗಳಾದ ಲಿಂಗಯ್ಯ, ಶಶಿಧರ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..