ಚಿಕ್ಕಬಳ್ಳಾಪುರ: ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡವಾರು ಪ್ರಮಾಣ ಹಾಗೂ ಸೋಂಕಿನ ಪ್ರಕರಣಗಳ ಸಂಖ್ಯೆಯು ಸಹ ಕಳೆದ ಕೆಲವು ದಿನಗಳಿಂದ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಚುರುಕುಗೊಳಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಬೆಂಗಳೂರಿಗೆ ಹತ್ತಿರವಿರುವುದರಿಂದ ಸಾಕಷ್ಟು ಜನರು ಕೆಲಸದ ನಿಮಿತ್ತ ದಿನ ನಿತ್ಯ ಹೋಗಿ ಬರುತ್ತಿರುತ್ತಾರೆ. ಅಲ್ಲದೇ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕೋವಿಡ್ ಇಳಿಕೆಯಾಗಿರುವುದರಿಂದ ಜನರು ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಹೆಚ್ಚೆಚ್ಚು ಗುಂಪು ಸೇರುತ್ತಿದ್ದಾರೆ. ಕೋವಿಡ್ 1 ಮತ್ತು 2ನೇ ಅಲೆಯಲ್ಲಿ ಅನುಭವಿಸಿದ ಸಂಕಷ್ಟದ ದಿನಗಳನ್ನು ಮರೆಯುವ ಹಂತಕ್ಕೆ ತಲುಪಿದ್ದಾರೆ. ಇದೇ ರೀತಿ ಮುಂದುವರಿದರೆ ಸಂಕಷ್ಟದ ದಿನಗಳು ಎದುರಾಗುವ ಸಂಭವ ಜಾಸ್ತಿನೇ ಇರುತ್ತೆ. ಆದ್ದರಿಂದ ಕೋವಿಡ್ ಟಾಸ್ಕ್ ಪೋರ್ಸ್ ಕಾರ್ಯಪಡೆಗಳು ಮತ್ತು ಕೋವಿಡ್ ಕರ್ತವ್ಯಕ್ಕೆ ನೇಮಕವಾಗಿರುವ ನೋಡಲ್ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯಪ್ರವೃತ್ತರಾಗಬೇಕಿದೆ.
ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಪಾಲಿಸದೇ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವುದನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕಿದೆ. ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್ ರವರುಗಳ ನೇತೃತ್ವದಲ್ಲಿ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ತಮಗೆ ನಿಗಧಿಪಡಿಸಿರುವ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕರೋನಾ ಹೆಚ್ಚಾಗದಂತೆ ಹಾಗೂ ಕೋವಿಡ್ ಅನ್ನು ಶೂನ್ಯ ಪ್ರಮಾಣಕ್ಕೆ ತಗ್ಗಿಸುವ ನಿಟ್ಟಿನಲ್ಲಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಬೇಕಿದೆ ಎಂದರು.
ಖಾಸಗಿ ಕ್ಲಿನಿಕ್ ಗಳ ಮೇಲೆ ನಿಗಾ: ಜ್ವರ, ಕೆಮ್ಮು ಇನ್ನಿತರೇ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಕ್ಲಿನಿಕ್ ಗಳು ಚಿಕಿತ್ಸೆಗಾಗಿ ಬರುವವರ ವಿವರವನ್ನು ಆರೋಗ್ಯಾಧಿಕಾರಿಗಳಿಗೆ ಪ್ರತಿದಿನ ನೀಡಬೇಕು. ಚಿಕಿತ್ಸೆಗಾಗಿ ಬರುವ ರೋಗಿಗಳನ್ನು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಬೇಕು ಆ ನಂತರವೇ ಅರೋಗ್ಯ ಸೇವೆ ಒದಗಿಸಬೇಕು. ಖಾಸಗಿ ಕ್ಲಿನಿಕ್ ಗಳ ಕಾರ್ಯ ವೈಖರಿಯ ಬಗ್ಗೆ ಪ್ರತಿದಿನ ತೀವ್ರ ನಿಗಾವಹಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸಿದ ಕ್ಲಿನಿಕ್ ಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಗತ್ಯ ಕ್ರಮ ವಹಿಸಿ ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಚಿಂತಾಮಣಿ ತಾಲ್ಲೂಕು ತಹಸೀಲ್ದಾರ್ ಈಗಾಗಲೇ ನಿಯಮ ಮೀರಿದ 04 ಕ್ಲಿನಿಕ್ ಗಳನ್ನು ಬಂದ್ ಮಾಡಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದರು.
ಮಕ್ಕಳ ಕೋವಿಡ್ ಆರೈಕೆಗಾಗಿ ಆಮ್ಲಜನಕ ಸಹಿತ ಹಾಸಿಗೆಗಳ ಮೀಸಲು: ಸಂಭವಿತ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 3ನೇ ಅಲೆ ಬರುತ್ತದೋ ಇಲ್ಲವೋ ಗೊತ್ತಿಲ್ಲ ಆದರೂ ಕೂಡ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ 50 ಆಮ್ಲಜನಕ ಸಹಿತ ಹಾಸಿಗೆಗಳನ್ನು ಮಕ್ಕಳ ಕೋವಿಡ್ ಚಿಕಿತ್ಸೆಗಾಗಿ ಮೀಸಲಿಡಬೇಕು. CHC ಮತ್ತು MCH ಆಸ್ಪತ್ರೆಗಳು ಸೇರಿದಂತೆ ಒಟ್ಟು 170 ಹಾಸಿಗೆಗಳನ್ನು ಮಕ್ಕಳ ಕೋವಿಡ್ ಆರೈಕೆಗಾಗಿ ಮೀಸಲಿಡಬೇಕು. ಇರುವ ಆರೋಗ್ಯ ಸವಲತ್ತುಗಳಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕು ಹಾಗೂ ಕೋವಿಡ್ ಲಸಿಕೆ ಲಭ್ಯವಾದಂತೆ ಲಸಿಕಾರಣವನ್ನು ನಿರಂತರವಾಗಿ ಮುಂದುವರೆಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು ಮಾತನಾಡಿ, ಕೋವಿಡ್ ನ ಮೊದಲ ಮತ್ತು ಎರಡನೇ ಅಲೆಯ 2 ಬಾರಿಯು ಅನುಭವವದ ವಿವರವನ್ನು ಇಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸಬೇಕಿದೆ. ಕಳೆದ ಎರಡು ಅಲೆಗಳಲ್ಲಿ ಯಾವ ಹಳ್ಳಿ ಅಥವಾ ಪ್ರದೇಶದಲ್ಲಿ ಮೊದಲು ಕೋವಿಡ್ ಕಾಣಿಸಿಕೊಂಡಿತ್ತು ಹಾಗೂ ಹೆಚ್ಚಾಗಿ ವ್ಯಾಪಿಸಿತ್ತು, ಆ ಭಾಗದಲ್ಲಿ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಹೆಚ್ಚಾಗಿ ಜರುಗಿಸಬೇಕಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಯೋಜಿಸಿ ಕೋವಿಡ್ ನ್ನು ಶೂನ್ಯಕ್ಕೆ ಇಳಿಸಬೇಕಿದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ರವರು ಮಾತನಾಡಿ, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕೋವಿಡ್ ಪ್ರಕರಣಗಳು ನಿಧಾನಗತಿಯಲ್ಲಿ ಹೆಚ್ಚಾಗುತ್ತಿವೆ. ಮುಂದಾಗುವ ದುಷ್ಪರಿಣಾಮಗಳನ್ನು ತಡೆಯಬೇಕಾದರೆ ಪ್ರಸ್ತುತ 15 ರಿಂದ 20 ದಿವಸ ಹೆಚ್ಚಿನ ಮಟ್ಟದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ. ಬಸ್ ಸ್ಟಾಂಡ್, ಮಾರುಕಟ್ಟೆ, ಸರ್ಕಾರಿ ಕಚೇರಿಗಳಲ್ಲಿ ಸಾಮಾಜಿಕ ಅಂತರವನ್ನು ಮರೆತು ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ಹೆಚ್ಚಿನ ಮಟ್ಟದಲ್ಲಿ ದಂಡ ವಿಧಿಸಬೇಕಿದೆ. ಮಾರುಕಟ್ಟೆಯಲ್ಲಿನ ವಾಣಿಜ್ಯ ಮಳಿಗೆಗಳ ಮುಂದೆ ಗ್ರಾಹಕರು ಸಾಮಾಜಿಕ ಅಂತರ ಪಾಲಿಸಲು ಮಾರ್ಕಿಂಗ್ ಮಾಡಿಸಬೇಕಿದೆ. ಇದನ್ನು ಉಲ್ಲಂಘಿಸಿದ ಮಾಲಿಕರಿಗೆ 5000 ರೂ ವರೆಗೂ ದಂಡ ವಿಧಿಸಲೇಬೇಕಾಗಿದೆ ಎಂದರು.
ಸಂವಾದ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಇಂದಿರಾ ಆರ್ ಕಬಾಡೆ, ಜಿಲ್ಲಾ ಮಟ್ಟದ ಕೋವಿಡ್ ನೋಡಲ್ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……