ದೊಡ್ಡಬಳ್ಳಾಪುರ: ದೇಶದಲ್ಲಿ ಯಾವುದೇ ಅಭಿವೃದ್ದಿ ಇಲ್ಲದಿದ್ದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಆತಂಕ ವ್ಯಕ್ತಪಡಿಸಿದರು.
ಕರೊನಾ ಸೋಂಕನ್ನು ತಡೆಗಟ್ಟಲು ಘೋಷಿಸಲಾದ ಲಾಕ್‍ಡೌನ್ ಕಾರಣ ಸಂಕಷ್ಟಕ್ಕೆ ಒಳಗಾದ ಸವಿತಾ ಸಮಾಜದ ನಾದಸ್ವರ, ಡೋಲು ಕಲಾವಿದರಿಗೆ ಹಾಗೂ ಕ್ಷೌರಿಕ ಕಾರ್ಮಿಕರಿಗೆ ನಗರದ ಸವಿತ ಸಮಾಜ ಭವನದಲ್ಲಿ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರ ದೇಶದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 70 ವರ್ಷಗಳ ಕಾಲ ಮನೆಯ ಮಗುವನ್ನು ಕಾಪಾಡಿದಂತೆ ದೇಶದಲ್ಲಿ ಆಳ್ವಿಕೆ ನಡೆಸಿದೆ. ಶಿಕ್ಷಣ ಕ್ಷೇತ್ರ, ನೀರಾವರಿ, ಕೈಗಾರಿಕೆ ಸ್ಥಾಪನೆ ಮಾಡಿ ಉದ್ಯೋಗ್ಯ ಸೃಷ್ಟಿ ಮಾಡಿತ್ತು. ಆದರೀಗಾ ಎಲ್ಲವೂ ನಶಿಸಿ ಹೋಗುತ್ತಿದೆ.
ತಾಲೂಕಿಗೆ ಜಿಲ್ಲಾ ಆಸ್ಪತ್ರೆ ತರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾರಣವಾಗಿತ್ತು, ಅದು ಮುಂದುವರೆದು ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಅನುಮೋದನೆ ದೊರಕಿತು. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪರ ನಾಲ್ಕು ಸಲ ಮನವಿ ಮಾಡಿದರು ಸ್ಪಂದಿಸದೆ ಬಾಕಿ ಉಳಿದಿದೆ.
ಕರೊನಾ ಮೂರನೆ ಅಲೆಯ ಮಕ್ಕಳಿಗೆ ಬರುವ ಆತಂಕ ಎದುರಾಗಿದೆ. ನಮ್ಮ ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಇಲ್ಲದ ಕಾರಣ ಉಸ್ತುವಾರಿ ಸಚಿವರಾಗಿದ್ದ ಆರ್.ಅಶೋಕ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ ಮಾಡಿ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗಿದೆ. ಇದೂ ಸಹ ಕೇಂದ್ರ ರಾಜ್ಯ ಸರ್ಕಾರದ ಅನುದಾನವಲ್ಲ. ಕೈಗಾರಿಕೆಗಳು ಜನಪರ ಕಾರ್ಯಕ್ಕೆ ಇಂತಿಷ್ಟು ಹಣ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ವೀರಪ್ಪಮೋಯ್ಲಿ ಜಾರಿ ಮಾಡಿದ ಕಾನೂನು ಕಾರಣ ಎಂದರು.
2013ರ ಚುನಾವಣೆಯಲ್ಲಿ ಆಯ್ಕೆಯಾದ ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೈಗೊಂಡ ಕಾರ್ಯ ನಿಮ್ಮ ಮುಂದಿದೆ. ವಸತಿ ನಿಲಯಗಳು ಪೂರ್ಣಗೊಂಡಿವೆ,ಪಿಂಚಣಿ, ಪಡಿತರ ಕಾರ್ಡ್ ಭರಪೂರ ನೀಡಿ ತಾಲೂಕಿನ ಜನತೆಗೆ ನೀಡಲಾಗಿದೆ.
ಸವಿತ ಸಮಾಜದ ಭವನ ಕಾಮಗಾರಿ ಪೂರ್ಣಗೊಳ್ಳಲು ತಮ್ಮದೇ ಸಮಾಜದ ವ್ಯಕ್ತಿಯೋರ್ವ ಅಡ್ಡಿಯಾಗಿದ್ದರಿಂದ ತಡೆಯಾಗಿದೆ. ಸರ್ಕಾರದ ಅನುದಾನ ಬಿಡುಗಡೆ ಮಾಡಲು ಹಲವು ಪ್ರಯತ್ನ ನಡೆಸಿದ್ದು ಕೆಲವೆ ದಿನಗಳಲ್ಲಿ ಅನುದಾನ ದೊರಕಲಿದೆ. ಅದಲ್ಲದೆ ಮುಂದಿನ ವರ್ಷಗಳಲ್ಲಿ ಹೆಚ್ಚಿನ ಅನುದಾನ ನೀಡಿ ಭವನ ಪೂರ್ಣ ಗೊಳಿಸಲಾಗುವುದೆಂದರು.
ವಿಧಾನಪರಿಷತ್ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್ ಮಾತನಾಡಿ, 224 ಕ್ಷೇತ್ರಗಳಿಗೆ ಮಾದರಿ ಶಾಸಕ ಟಿ.ವೆಂಕಟರಮಣಯ್ಯ. ಮುಂದುವರಿದ ಸಮುದಾಯದ ಕೆಲ ನಾಯಕರಲ್ಲಿನ ದರ್ಪ ಈ ವ್ಯಕ್ತಿಯಲ್ಲಿ ಇಲ್ಲವಾಗಿದೆ. ಸವಿತ ಸಮಾಜ ಸಮುದಾಯ ಶಾಸಕ ವೆಂಕಟರಮಣಯ್ಯ ಅಂತಹ ಜನಪರ ಕಾಳಜಿ ಇರುವ ಜನ ಪ್ರತಿನಿಧಿಗಳ ಬೆಂಬಲವಾಗಿ ನಿಲ್ಲಬೇಕಿದೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಹೇಮಂತರಾಜು ಮಾತನಾಡಿ, ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಲಾಕ್‍ಡೌನ್ ಕಾರಣ ಸಂಕಷ್ಟದಲ್ಲಿರುವ ಜನರಿಗೆ ಅಡುಗೆ ಅನಿಲ, ಡಿಸೆಲ್ ಪೆಟ್ರೋಲ್, ಅಡುಗೆ ಎಣ್ಣೆ ಸೇರಿದಂತೆ ಬೆಲೆ ಏರಿಕೆಯ ಕಾಣಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಜನತೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಿದೆ. ಲಾಕ್‍ಡೌನ್ ಕಷ್ಟದಲ್ಲಿ ತಾಲೂಕಿನ ಜನರ ಕಷ್ಟಕ್ಕೆ ನಿರಂತರ ಅನ್ನದಾಸೋಹ, ಆಹಾರ ಕಿಟ್ ವಿತರಿಸಿ ಜನರ ಕಷ್ಟಕ್ಕೆ ನೆರವಾಗಿರುವ ಶಾಸಕ ಟಿ.ವೆಂಕಟರಮಣಯ್ಯ ಅವರ ಜನಪರ ಕಾಳಜಿಯನ್ನು ತಾಲೂಕಿನ ಜನತೆ ಮನಗಾಣಬೇಕಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನಾಥ್, ಹಿರಿಯ ಮುಖಂಡರಾದ ಕೆಂಪಣ್ಣ ಮಾತನಾಡಿದರು.
ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಸವಿತಾ ಸಮಾಜದ ಹಿರಿಯ ಮುಖಂಡರಾದ ರಾಮಾಂಜಿನಯ್ಯ, ಮುಖಂಡರಾದ ಸೋಮರುದ್ರ ಶರ್ಮ, ಮಜರಾಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಸಂದೇಶ್, ಆದಿತ್ಯ ನಾಗೇಶ್, ರೇವತಿ ಅನಂತರಾಮ್, ಆಂಜನಮೂರ್ತಿ, ಅಖಿಲೇಶ್, ಅಪ್ಪಿವೆಂಕಟೇಶ್, ನಾಗರತ್ನಮ್ಮ, ಶ್ರೀನಗರ ಬಶೀರ್, ಪು.ಮಹೇಶ್, ಕುಮುದಾ, ಅಮರ್ ನಾಥ್ ಭೀಮರಾಜ್, ರೇಣುಕಾ, ಮಡಿವಾಳ ಸಂಘದ ಅಧ್ಯಕ್ಷ ರಂಗಸ್ವಾಮಿ ಮತ್ತಿತರಿದ್ದರು.
ಈ ಸಂದರ್ಭದಲ್ಲಿ 350 ದಿನಸಿ ಕಿಟ್ ವಿತರಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……