ಚಿಕ್ಕಬಳ್ಳಾಪುರ: ಮಗುವಿನ ಪೋಷಣೆ ಮತ್ತು ಬೆಳವಣಿಗೆಯಲ್ಲಿ ತಾಯಿ ಎದೆಹಾಲಿನ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮಗುವಿಗೆ ತಾಯಿ ಎದೆಹಾಲು ಅಮೃತಕ್ಕೆ ಸಮಾನವಾದದ್ದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸ್ತನ್ಯಪಾನ ಸಂರಕ್ಷಿಸಿ, ಜವಾಬ್ಧಾರಿಯನ್ನು ಹಂಚಿಕೊಳ್ಳೋಣ’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಗು ಜನನದ ಅರ್ಧ ಗಂಟೆಯೊಳಗೆ ತಾಯಿ ಎದೆಹಾಲು ಉಣಿಸುವುದನ್ನು ಕಡ್ಡಾಯವಾಗಿ ಆರಂಭಿಸಬೇಕು. ಆರು ತಿಂಗಳವರೆಗೆ ಮಗುವಿಗೆ ತಾಯಿ ಎದೆಹಾಲನ್ನು ಹೊರತು ಪಡಿಸಿ ಬೇರೆ ಏನನ್ನೂ ಕೊಡಬಾರದು. ಆರು ತಿಂಗಳು ತುಂಬಿದ ನಂತರ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ಪ್ರಾರಂಭಿಸಿ ಎರಡು ವರ್ಷದವರೆಗೂ ಎದೆಹಾಲನ್ನು ನೀಡವುದು ಒಳಿತು. ತಾಯಿ ಹಾಲು ಕುಡಿಸುವುದರಿಂದ ಮಗುವಿನ ಮೆದುಳಿನ ಗರಿಷ್ಠ ಉತ್ತೇಜನಕ್ಕೆ ಸಹಕಾರಿಯಾಗಿ ಬುದ್ದಿಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಮಗು ಬೆಳೆದಂತೆ ರೋಗನಿರೋಧಕ ಶಕ್ತಿಯೂ ಹೆಚ್ಚಾಗಲು ಕಾರಣವಾಗುತ್ತದೆ, ತಾಯಿ ಮತ್ತು ಮಗುವಿನ ನಡುವೆ ಬಾಂಧವ್ಯ ಹೆಚ್ಚುತ್ತದೆ. ಇದರಿಂದ ಮಗುವಿಗೆ ಮಾತ್ರವೇ ಅಲ್ಲದೇ ತಾಯಿಯ ಆರೋಗ್ಯದ ದೃಷ್ಟಿಯಿಂದ ಹಲವು ಪ್ರಯೋಜನಗಳಿವೆ ಎಂಬುದನ್ನು ಅರಿತು ಎದೆಹಾಲುಣಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಾಯಂದಿರಿಗೆ ಸಲಹೆ ಮಾಡಿದರು.
ಮಗು ಎದೆಯ ಹಾಲು ಚೀಪುವುದರಿಂದ ಹಾಲಿನ ನಾಳಗಳು ಹಾಲನ್ನು ಹೆಚ್ಚಾಗಿ ಉತ್ಪತ್ತಿಯಾಗಿಸಿ ಎದೆ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಆದ್ದರಿಂದ ತಾಯಿ ಎದೆಹಾಲನ್ನು ತಪ್ಪದೇ ತಾಯಿಂದಿರು ಕುಡಿಸಬೇಕು.ತಾಯಿ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನವಾಗಿದ್ದು ಅತ್ಯುತ್ತಮವಾದ ಪೌಷ್ಠಿಕವಾದ ಆಹಾರವಾಗಿದೆ ಹೆರಿಗೆಯ ಬಳಿಕ ಮೊದಲ ಮೂರು ದಿನಗಳ ಕಾಲ ಬರುವ ಗಿಣ್ಣು ಹಾಲಿನಲ್ಲಿ ಹಲವು ರೋಗಗಳನ್ನು ತಡೆಯುವ ಲಸಿಕೆಯ ಗುಣವಿರುತ್ತದೆ. ಹೀಗಾಗಿ, ಮೌಢ್ಯಕ್ಕೆ ಶರಣಾಗುವ ಬದಲು ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ಶಿಶುವಿಗೆ ತಾಯಿ ಹಾಲುಣಿಸುವುದನ್ನು ರೂಢಿಸಿಕೊಳ್ಳಬೇಕು.ಮಕ್ಕಳ ಬೆಳವಣಿಗೆಗೆ ಹಾಲುಣಿಸುವುದು ದೇವರು ಕೊಟ್ಟ ವರವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ಅವರು ಮಾತನಾಡಿ, ಮಗು ಜನಿಸಿದ ನಂತರದ ಆರು ತಿಂಗಳವರೆಗೆ ಯಾವುದೇ ರೀತಿಯ ಆಹಾರವನ್ನು ಹೆಚ್ಚುವರಿಯಾಗಿ ಮಗುವಿಗೆ ನೀಡಬಾರದು. ಇದರಿಂದ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿರುತ್ತದೆ. ಇದರ ಬದಲು, ಆರು ತಿಂಗಳವರೆಗೆ ತಾಯಿ ಹಾಲನ್ನೇ ಪ್ರಮುಖ ಆಹಾರವಾಗಿ ನೀಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಮಗುವಿಗೆ ಎದೆ ಹಾಲನ್ನು ನೀಡಿದರೆ ತನ್ನ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪುಕಲ್ಪನೆಯಿಂದ ಕೆಲವು ತಾಯಂದಿರು ಮಗುವಿಗೆ ಎದೆ ಹಾಲನ್ನು ಕೊಡಲು ಹಿಂಜರಿಕೆ ಮಾಡುತ್ತಿದ್ದರು. ಆದರೆ, ಇದು ತಪ್ಪು ಕಲ್ಪನೆ. ತಾಯಿಯು ಮಗುವಿಗೆ ಎದೆಹಾಲನ್ನು ನೀಡುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿ, ಭೌತಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ. ಸ್ಪರ್ಶ ಸುಖ ಅನುಭವಿಸುವ ತಾಯಿ-ಮಗುವಿನ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿದೆ ಎಂದರು.
ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ರುದ್ರಮೂರ್ತಿರವರು ಮಾತನಾಡಿ, ಶಿಶು ಜನಿಸಿದ ಆರು ತಿಂಗಳವರೆಗೆ ದೇಹ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ಹಾಲುಣಿಸುವ ತಾಯಿ ತನ್ನ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಜೊತೆಗೆ, ಆರು ತಿಂಗಳೊಳಗೆ ತಾಯಿಯ ಹಾಲಿನ ಬದಲು ಹೆಚ್ಚುವರಿಯಾಗಿ ಆಹಾರ ನೀಡುವುದರಿಂದಲೂ ಮಗುವಿಗೆ ಸೋಂಕು ತಗಲುವ ಸಂಭವನೀಯತೆ ಹೆಚ್ಚಿರುತ್ತದೆ ಎಂದು ಅವರು ನುಡಿದರು.
ಮಕ್ಕಳ ತಜ್ಞರಾದ ಡಾ.ಪ್ರಕಾಶ್ ಮಾತನಾಡಿ, ತಾಯಿಯ ಎದೆ ಹಾಲಿನಲ್ಲಿ ಶಿಶುವಿನ ಸದೃಢ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು, ವಿಟಮಿನ್, ಖನಿಜಾಂಶಗಳು ಸಮೃದ್ಧವಾಗಿರುತ್ತವೆ. ಒಂದು ವೇಳೆ, ಮಗುವಿಗೆ ತಾಯಿಯ ಹಾಲಿನ ಬದಲು ಪೂರಕ ಆಹಾರವನ್ನು ನೀಡುವ ಪರಿಪಾಠ ರೂಢಿಸಿಕೊಂಡರೆ, ಮಗುವಿನ ಬದುಕುವ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿ, ಬಾಣಂತಿಯರು ಹಾಗೂ ತಾಯಂದಿಯರಿಗೆ ಪೌಷ್ಠಿಕಾಂಶವುಳ್ಳ ಔಷಧಿ ಹಾಗೂ ಆಹಾರ ಕಿಟ್ ವಿತರಿಸಲಾಯಿತು.
ಎನ್ಆರ್ ಸಿ ಕೇಂದ್ರಕ್ಕೆ ಡಿಸಿ ಭೇಟಿ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಆರ್.ಲತಾ ಅವರು, ಜಿಲ್ಲಾ ಆಸ್ಪತ್ರೆಯಲ್ಲಿರುವ ಎಲ್ಲಾ ವಾರ್ಡುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಅಪೌಷ್ಠಿಕ ಮಕ್ಕಳ ಪುನಶ್ಚೇತನ ಹಾಗೂ ತಾಯಂದಿರ ಕುಶಲ ಮತ್ತು ಕೌಶಲ್ಯ ಕೇಂದ್ರ(ಎನ್ಆರ್ ಸಿ)ಕ್ಕೆ ಭೇಟಿ ನೀಡಿ ಅಲ್ಲಿ ದಾಖಲಾಗಿರುವ ಅಪೌಷ್ಠಿಕ ಮಕ್ಕಳು ಮತ್ತು ತಾಯಂದಿರ ಆರೋಗ್ಯ ವಿಚಾರಿಸಿದರು. ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ವೈದ್ಯರು ನೀಡುವ ಚಿಕಿತ್ಸೆಯ ಜೊತೆಗೆ ಸಲಹೆ ಸೂಚನೆಗಳನ್ನು ತಾಯಂದಿರು ಪಾಲಿಸುವ ಮೂಲಕ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಆರ್.ಸಿ.ಎಚ್. ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ತಾಲೂಕು ವೈದ್ಯಾಧಿಕಾರಿ ಡಾ.ಮಂಜುಳಾ, ಸಿಡಿಪಿಒ ಗಂಗಾಧರಯ್ಯ, ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……