ಬೆಂಗಳೂರು: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ ವಾರ್ಷಿಕ ಶಿಷ್ಯವೇತನ ಪ್ರಕಟಿಸಿದೆ. ಕೋರ್ಸ್‍ಗಳಿಗೆ ಅನುಸಾರವಾಗಿ ಶಿಷ್ಯವೇತನದ ಹಣವನ್ನು ನಿಗದಿಪಡಿಸಲಾಗಿದೆ.
ಪಿಯುಸಿ, ಐಟಿಐ, ಡಿಪ್ಲೋಮಾ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ 2,500, ವಿದ್ಯಾರ್ಥಿನಿಯರಿಗೆ 3,000 ರೂಪಾಯಿ ಸ್ಕಾಲರ್‍ಶಿಪ್ ಸಿಗಲಿದೆ. ಬಿಎ, ಬಿಎಸ್ಸಿ, ಬಿಕಾಂ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ 5,000, ವಿದ್ಯಾರ್ಥಿನಿಯರಿಗೆ 5,500 ರೂಪಾಯಿ ಶಿಷ್ಯವೇತನ ಸಿಗಲಿದೆ.
ಎಲ್‍ಎಲ್‍ಬಿ, ಪ್ಯಾರಾ ಮೆಡಿಕಲ್, ನರ್ಸಿಂಗ್, ಬಿ ಫಾರ್ಮಾ ಕೋರ್ಸುಗಳ ವಿದ್ಯಾರ್ಥಿಗಳಿಗೆ 7,500, ವಿದ್ಯಾರ್ಥಿನಿಯರಿಗೆ 8,000 ರೂಪಾಯಿ ಸ್ಕಾಲರ್‍ಶಿಪ್ ಸಿಗಲಿದೆ. ಎಂಬಿಬಿಎಸ್, ಬಿಟೆಕ್, ಬಿಇ ಮತ್ತು ಎಲ್ಲ ಪಿಜಿ ಕೋರ್ಸ್‍ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ 10,000, ವಿದ್ಯಾರ್ಥಿನಿಯರಿಗೆ 11,000 ರೂಪಾಯಿ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.
ಈ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಸಚಿವ ಸಂಪುಟದ ನಿರ್ಣಯದಂತೆ ಸರ್ಕಾರ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ (Scholarship) ಯೋಜನೆಯನ್ನು ಜಾರಿಗೆ ತರಲು ಯೋಜನೆಯ ರೂಪುರೇಷೆಗಳನ್ನು ರಚಿಸಿ, ಆದೇಶಿಸಿದೆ.
ಎಸ್.ಎಸ್.ಎಲ್.ಸಿ ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು / ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (Direct Benefit Transfer DB7) ಪದ್ಧತಿಯ ಮೂಲಕ 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರ ಅನುಮೋದನೆ ನೀಡಿದ್ದು, ನಾಡಿನ ರೈತರ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..