ದೊಡ್ಡಬಳ್ಳಾಪುರ: ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷಶನ್ ಸಂಸ್ಥಾಪಕ ಜಗ್ಗಿ ವಾಸುದೇವ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ಕಾವೇರಿ ಕೂಗು ಎಂಬ ಅಭಿಯಾನದ ಮೂಲಕ ರೈತರನ್ನು ಅರಣ್ಯ ಕೃಷಿಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೂಢಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಮ್ಮಪ್ರಭು ತಿಳಿಸಿದರು.
ತಾಲೂಕಿನಆರೂಢಿ ಗ್ರಾಮಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಕಾವೇರಿ ಕೂಗು ಗ್ರಾಮ ಸಂಪರ್ಕ ಅಭಿಯಾನದಲ್ಲಿ ಅವರು ಮಾತಾನಾಡಿದರು.
ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ ಹಾಗೂ ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದಾಗಿದೆ. ಈ ಅಭಿಯಾನದ ಮೂಲಕ ರೈತ ಸಂಕುಲಕ್ಕೆ ಸರ್ಕಾರದ ನೆರವು ಕೊಡಿಸುವುದು ಹಾಗೂ ಅರಣ್ಯ ಕೃಷಿ ಪರಿಕಲ್ಪನೆಯಡಿ 242 ಕೋಟಿ ಮರ ಬೆಳೆಸುವ ಮಹತ್ವದ ಗುರಿ ಹೊಂದಿದ್ದಾರೆ.
ಸಾಮಾನ್ಯ ಜನರಿಗೆ ಅರಣ್ಯ ಕೃಷಿ ಕುರಿತು ಪರಿಕಲ್ಪನೆಯಿಲ್ಲ. ಈ ಕಾರಣದಿಂದಾಗಿ ತಮಿಳುನಾಡಿನಲ್ಲಿ ಯಶಸ್ಸು ಕಂಡ ನಂತರ ಕರ್ನಾಟಕದಲ್ಲಿ ಅರಣ್ಯ ಕೃಷಿ ಯೋಜನೆಯಡಿ ಸಹಾಯಧನ ಕೊಡಿಸಿ ಕೃಷಿಕರೂ ಅಭಿಯಾನದಲ್ಲಿ ಭಾಗಿಯಾಗುವಂತೆ ಮಾಡಿದ್ದಾರೆ ಎಂದವರು ತಿಳಿಸಿದರು.
ಈಶಾ ಪೌಂಡೇಶನ್ ಸ್ವಯಂ ಸೇವಕ ಲಿಖಿತ್ ಮಾತನಾಡಿ, ಗ್ರಾಮ ಸಂಪರ್ಕ ಅಭಿಯಾನವು ಆ. 2ರಿಂದ ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ 1,785 ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುತ್ತಿದೆ.
ರೈತರಿಗೆ ಯಾವ ರೀತಿಯ ಗಿಡಗಳು ಬೇಕು ಎಂಬ ಮಾಹಿತಿ ಪಡೆಯುವ ಉದ್ದೇಶದಿಂದ ಕಾವೇರಿ ಕೂಗು ಗ್ರಾಮ ಸಂಪರ್ಕ ಅಭಿಯಾನ ತಂಡವು ಎಲ್ಲ 1785 ಪಂಚಾಯತ್ಗಳಲ್ಲಿಯೂ ‘ಮರ ಮಿತ್ರ’ ಎಂಬ ಹಸರಿನಲ್ಲಿ ಸಂಯೋಜಕರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಈಶಾ ಪೌಂಡೇಶನ್ ಸ್ವಯಂ ಸೇವಕ ರಾಹುಲ್, ಅರಣ್ಯ ಇಲಾಖೆ ಸಿಬ್ಬಂದಿ ವಿನಯ್ ಕುಮಾರ್ ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..