ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆಗೆ ಅಸೂಚನೆ ಪ್ರಕಟವಾಗಿದ್ದು, ಮೊದಲ ದಿನ 8 ನಾಮಪತ್ರ ಅರ್ಜಿಗಳು ವಿತರಣೆಯಾಗಿದ್ದು, ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲವೆಂದು ಚುನಾವಣಾಧಿಕಾರಿ ಟಿ.ಮುರುಡಯ್ಯ ತಿಳಿಸಿದ್ದಾರೆ.
ನಗರಸಭೆಯ 31 ವಾರ್ಡ್ಗಳಿಗೆ ಸೆ. 3 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಸೂಚನೆ ಹೊರಡಿಸಿದ್ದಾರೆ.
ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿಗಳ ಕಚೇರಿಯ ಆವರಣದಲ್ಲಿ - 3 ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಒಂದು ಸೇರಿ ಒಟ್ಟು 4 ಚುನಾವಣಾ ಕೇಂದ್ರ ಸ್ಥಾನಗಳನ್ನು ವ್ಯವಸ್ಥೆ ಮಾಡಲಾಗಿದೆ.
ನಗರಸಭೆಯ ವಾರ್ಡ್ ಸಂಖ್ಯೆ 1ರಿಂದ 8 ರವರೆಗೆ ತಾಲೂಕು ಪಂಚಾಯಿತಿ ಕಾರ್ಯಾಲಯ ಚುನಾವಣಾ ಕೇಂದ್ರ ಸ್ಥಾನವಾಗಿದ್ದು, ಚುನಾವಣಾಧಿಕಾರಿಯಾಗಿ ಟಿ.ಮುರಡಯ್ಯ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಎಚ್.ಬಿ.ಹನುಮಂತಪ್ಪ ಹಿಂದಿನಮನೆ ಕಾರ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ಸಂಖ್ಯೆ 9ರಿಂದ 16ರವರೆಗೆ ಹಿರಿಯ ತೋಟಗಾರಿಕೆ ನಿರ್ದೇಶಕರ ಕಛೇರಿಯು ಚುನಾವಣಾ ಕೇಂದ್ರ ಸ್ಥಾನವಾಗಿದ್ದು, ಚುನಾವಣಾಧಿಕಾರಿಯಾಗಿ ಶ್ರೀನಿವಾಸ್, ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉದಯ್ ಕಾರ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ಸಂಖ್ಯೆ 17ರಿಂದ 24ರವರೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ,(ಪಂಚಾಯತ್ ರಾಜ್ ಎಂಜಿನಿಯರಿಗ್ ವಿಭಾಗ) ಚುನಾವಣಾ ಕೇಂದ್ರ ಸ್ಥಾನವಾಗಿದ್ದು, ಚುನಾವಣಾಧಿಕಾರಿಯಾಗಿ ಎಂ.ವಿ.ಪ್ರಸಾದ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಎನ್.ಶ್ರೀನಿವಾಸ್ ಕಾರ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ಸಂಖ್ಯೆ 25ರಿಂದ 31ರವರೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ (ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ), ಚುನಾವಣಾ ಕೇಂದ್ರ ಸ್ಥಾನವಾಗಿದ್ದು, ಚುನಾವಣಾಧಿಕಾರಿಯಾಗಿ ಬಿ.ಕೆ.ಯೋಗೇಶ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸೋಮಶೇಖರ್ ಕಾರ್ಯ ನಿರ್ವಹಿಸಲಿದ್ದಾರೆ.
ಸೋಮವಾರ ಚುನಾವಣಾ ಕೇಂದ್ರ ಸ್ಥಾನದಲ್ಲಿ ಚುನಾವಣಾಕಾರಿಗಳು ನಾಮಪತ್ರದ ಅರ್ಜಿಗಳನ್ನು ನೀಡಲು ಕ್ರಮವಾಗಿ ಸಿದ್ದಪಡಿಸಿಕೊಳ್ಳುತ್ತಿದ್ದರು. ಚುನಾವಣೆಗೆ ರ್ಸ್ಪಸುವ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ನಾಮಪತ್ರದ ಅರ್ಜಿ ಪಡೆದು, ತಮಗಿರುವ ಅನುಮಾನಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು.
ಚುನಾವಣೆ ಸೆ.3 ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಆ.16ರಂದು ಜಿಲ್ಲಾಧಿಕಾರಿಗಳು ಅಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಆ.23 ಕೊನೆಯ ದಿನವಾಗಿದೆ. ಆ.24 ನಾಮಪತ್ರಗಳ ಪರೀಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಆ.26 ಕಡೆಯ ದಿನವಾಗಿರುತ್ತದೆ. ಚುನಾವಣೆ ಸೆ.3ರಂದು ನಡೆಯಲಿದ್ದು, ಸೆ.6ರಂದು ಮತ ಎಣಿಕೆಗೆ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.
ಸೋಮವಾರಂದು 8 ಅಭ್ಯರ್ಥಿಗಳು ನಾಮ ಪತ್ರ ಅರ್ಜಿ ಪಡೆದಿದ್ದು, ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಇನ್ನೂ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳದೇ ಮುಖಂಡರ ಸಭೆಗಳು ನಡೆಯುತ್ತಿವೆ.
ಈ ಬಾರಿಯೂ ಪಕ್ಷೇತರರರು ಹೆಚ್ಚಿನ ಮಟ್ಟದಲ್ಲಿ ಸ್ಪರ್ಧಿಸುವ ಲಕ್ಷಣಗಳು ಗೋಚರಿಸುತ್ತಿದ್ದು, ಬುಧವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಿರುಸುಗೊಳ್ಳಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..