ಬೆಂ.ಗ್ರಾ.ಜಿಲ್ಲೆ: ರಾಜ್ಯದಲ್ಲಿ ಮುಂದುವರೆದಿರುವ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಪ್ರಸ್ತುತ ಘೋಷಣೆಯಾಗಿರುವ ದೊಡ್ಡಬಳ್ಳಾಪುರ ನಗರಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕೈಗೊಳ್ಳುವ ಕುರಿತು ಭಾರತ ಸಂವಿಧಾನದ ಪರಿಚ್ಛೇದ 243ಜೆಡ್ ಎ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ನಿರ್ದೇಶನಗಳ ನೀಡಿ, ಆದೇಶಿಸಿದ್ದಾರೆ.
ಅಭ್ಯರ್ಥಿಯೂ ಸೇರಿ ಗರಿಷ್ಠ ಐದು ಜನ ಬೆಂಬಲಿಗರೊಂದಿಗೆ ಮುಖಗವಸು (Face Mask) ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ, ಪ್ರಚಾರ ನಡೆಸಬಹುದಾಗಿದೆ.
ಪ್ರಚಾರಕ್ಕೆ ಯಾವುದೇ ವಾಹನಗಳನ್ನು ಬಳಸುವುದನ್ನು ಹಾಗೂ ಗುಂಪು ಗುಂಪಾಗಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ಪ್ರಚಾರದ ಸಂದರ್ಭದಲ್ಲಿ ಮುಖಗವಸು (Face Mask) ಅನ್ನು ಕಡ್ಡಾಯವಾಗಿ ಧರಿಸತಕ್ಕದ್ದು ಹಾಗೂ ವಿದ್ಯುನ್ಮಾನ ಮಾಧ್ಯಮ(ಇಲೆಕ್ಟ್ರಾನಿಕ್ ಮೀಡಿಯಾ)ದಲ್ಲಿ ಪ್ರಚಾರ ಕೈಗೊಳ್ಳಬಹುದಾಗಿದ್ದು, ಅವುಗಳ ವೆಚ್ಚದ ವಿವರಗಳನ್ನು ಸಲ್ಲಿಸಬೇಕು.ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದಾಗಿದ್ದು, ಈ ಸಮಯದಲ್ಲಿ ಕಡ್ಡಾಯವಾಗಿ ಮುಖಗವಸು(Face Mask) ಮತ್ತು ಕೈಗವಸನ್ನು ಧರಿಸಿರಬೇಕು.
ಈ ಎಲ್ಲ ಸೂಚನೆಗಳನ್ನು ಹೊರತುಪಡಿಸಿ, ಯಾವುದೇ ತರಹದ ಪ್ರಚಾರವನ್ನು ಕೈಗೊಳ್ಳುವಂತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..