ದುಬೈ: ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಕೂಟದ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದೆ. ಭಾರತ ಮತ್ತು ಪಾಕಿಸ್ಥಾನ ನಡುವಿನ ಹೈವೋಲ್ಟೇಜ್ ಕದನ ಅ.24ರಂದು ದುಬೈನಲ್ಲಿ ನಡೆಯಲಿದೆ.
ಭಾರತದಲ್ಲಿ ನಡೆಸಲು ಉದ್ದೇಶಿಸಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಕೋವಿಡ್-19 ಕಾರಣಗಳಿಂದಾಗಿ ಯುಎಇ ಮತ್ತು ಒಮಾನ್‌ಗೆ ಸ್ಥಳಾಂತರಿಸಲಾಗಿದೆ. ಬಿಸಿಸಿಐ ಆಯೋಜಕತ್ವದಲ್ಲಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಅಬುಧಾಬಿಯ ಶೇಖ್ ಝಯೀದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಹಾಗೂ ಒಮಾನ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ 2021ರ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೂ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಡೆಯಲಿವೆ.
ಸೂಪರ್ 12ನ ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಎರಡು ಅರ್ಹತೆ ಪಡೆದ ತಂಡಗಳು ಇರಲಿದೆ. ಇದರ ಮೊದಲ ಪಂದ್ಯ ಅ.23ರಂದು ನಡೆಯಲಿದೆ.
ಭಾರತ ತಂಡವು ಬಿ ಗುಂಪಿನಲ್ಲಿದ್ದು, ಪಾಕಿಸ್ಥಾನ, ಅಫ್ಘಾನಿಸ್ಥಾನ, ನ್ಯೂಜಿಲ್ಯಾಂಡ್ ಮತ್ತು ಎರಡು ಅರ್ಹತೆ ಪಡೆದ ತಂಡಗಳು ಆಡಲಿದೆ.
ಭಾರತ ಅ.24ರಂದು ಪಾಕ್ ವಿರುದ್ಧ, ಅ.31ರಂದು ನ್ಯೂಜಿಲ್ಯಾಂಡ್ ವಿರುದ್ದ, ನ.3ರಂದು ಅಫ್ಘಾನಿಸ್ಥಾನ ವಿರುದ್ದ, ನ.5ರಂದು ಅರ್ಹತೆ ಪಡೆದ ಮೊದಲ ತಂಡ ಮತ್ತು ನ.8ರಂದು ಅರ್ಹತೆ ಪಡೆದ ಎರಡನೇ ತಂಡವನ್ನು ಎದುರಿಸಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..