ಬೆಂ.ಗ್ರಾ.ಜಿಲ್ಲೆ: ಹೊಸಕೋಟೆ ತಾಲ್ಲೂಕಿನ ಗಣಗಲೂರು ಗ್ರಾಮ ಪಂಚಾಯಿತಿಯನ್ನು ಸಂಸದ ಆದರ್ಶ ಗ್ರಾಮವನ್ನಾಗಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾಗೂ ಹೊಸಕೋಟೆ ತಾಲ್ಲೂಕಿನ ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು ಹಾಗೂ ಐ.ಇ.ಸಿ ಚಟುವಟಿಕೆಗಳ ಅಡಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಅಭಿವೃದ್ಧಿ ಯೋಜನೆ(ವಿ.ಡಿ.ಪಿ)ಯ ಕ್ರಿಯಾ ಯೋಜನೆ ತಯಾರಿಸಿ, ಆಗಸ್ಟ್ 31 ರೊಳಗೆ ಸಲ್ಲಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ಎನ್.ಬಚ್ಚೇಗೌಡ ಅವರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಂಸದ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಗಣಗಲೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳ ಅಭಿವೃದ್ಧಿ ಯೋಜನೆಯನ್ನು(ವಿ.ಡಿ.ಪಿ) ತಯಾರಿಸುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಸಂಸದ ಆದರ್ಶ ಗ್ರಾಮವನ್ನು ಯಶಸ್ವಿಯಾಗಿ ಅಭಿವೃದ್ಧಿಗೊಳಿಸಲು ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ ಎಂದರಲ್ಲದೆ, ಇಲಾಖಾ ಯೋಜನೆಗಳನ್ನು ಗ್ರಾಮದಲ್ಲಿ ವ್ಯವಸ್ಥಿತವಾಗಿ ಅನುಷ್ಠಾನ ಮಾಡುವುದರ ಮೂಲಕ ಒಂದು ವರ್ಷದಲ್ಲಿ ಗ್ರಾಮದ ಸಂಪೂರ್ಣ ಚಿತ್ರಣ ಬದಲಾಗಲು ಹಾಗೂ ಆಧುನಿಕ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ, ರಸ್ತೆ ದುರಸ್ತಿ, ಸಾಕ್ಷರತೆ ಪ್ರಮಾಣ ಕುಂಠಿತ, ನಿರುದ್ಯೋಗ, ನೈರ್ಮಲ್ಯದ ಕೊರತೆ, ಅನಾರೋಗ್ಯದ ಸಮಸ್ಯೆ, ಅವೈಜ್ಞಾನಿಕ, ವೈದ್ಯಕೀಯ ಸೌಲಭ್ಯದ ಕೊರತೆ, ಸಾರಿಗೆ ಸಂಪರ್ಕದ ಸಮಸ್ಯೆ ಹೀಗೆ ಹತ್ತು ಹಲವಾರು ಮೂಲ ಸೌಕರ್ಯಗಳ ಸಮಸ್ಯೆಗಳಿದ್ದು, ಅವುಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಮಾನವ ಕಳ್ಳ ಸಾಗಾಣಿಕೆ ಹಾಗೂ ಮಾರಾಟದಂತಹ ಕೃತ್ಯಗಳು ಜರುಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರಲ್ಲದೆ, ಕೋವಿಡ್-19 ಮೂರನೇ ಅಲೆಯನ್ನು ಬರದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಕೊರೋನಾ ವೈರಸ್ ಹರಡದಂತೆ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಪ್ರತಿಯೊಂದು ಇಲಾಖೆಯು ಗಣಗಲೂರು ಗ್ರಾಮ ಪಂಚಾಯತಿಯಲ್ಲಿ ಒಂದೊಂದು ಯೋಜನೆಯನ್ನು ತಂದು, ಅನುಷ್ಠಾನಗೊಳಿಸುವುದರ ಮೂಲಕ ಸಂಸದ ಆದರ್ಶ ಗ್ರಾಮ ಪರಿಕಲ್ಪನೆ ಸಕಾರಗೊಳಿಸಬೇಕಿರುವ ಹಿನ್ನೆಲೆ, ಮುಂದಿನ ಬಾರಿ ಸಭೆಗೆ ಹಾಜರಾಗುವ ವೇಳೆ, ಇಲಾಖೆವಾರು ಕೈಗೊಂಡಿರುವ ಯೋಜನೆಗಳ ಕುರಿತ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.
ಆದರ್ಶ ಗ್ರಾಮದಡಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಯು ಒಂದು ವರ್ಷದೊಳಗೆ ಆಧುನಿಕ ಮೂಲಭೂತ ಸೌಕರ್ಯಗಳನ್ನು ಹೊಂದಬೇಕು. ಆಶ್ರಯ ಮನೆ ಯೋಜನೆಯಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಕಿ ಇರುವ 17 ಮನೆಗೆ ನೀರಿನ ವ್ಯವಸ್ಥೆ, 25 ಮನೆಗೆ ಶೌಚಾಲಯ ನಿರ್ಮಾಣವಾಗಬೇಕು, ಬಾಕಿ ಉಳಿದಿರುವ ಪಿಂಚಣಿ ಸೌಲಭ್ಯ, ಆಧಾರ್ ಕಾರ್ಡ್, ಜಾಬ್ ಕಾರ್ಡ್, ಆಯುಷ್ಮಾನ್ ಗುರುತಿನ ಚೀಟಿ, ಪೌತಿ ಖಾತೆ ಮಾಡಿಸಿಕೊಡಬೇಕು ಹಾಗೂ ಕಾರ್ಮಿಕರು ಕೆಲಸದ ಸಮಯದಲ್ಲಿ ಗಾಯಗೊಂಡರೆ ರೂ. 2 ಲಕ್ಷ, ನಿಧನಗೊಂಡಲ್ಲಿ, ರೂ. 5 ಲಕ್ಷ ಪರಿಹಾರ ನೀಡುವ ಮೂಲಕ ಕಾರ್ಮಿಕರ ಹಿತರಕ್ಷಣೆ ಕಾಪಾಡಬೇಕೆಂದು ತಿಳಿಸಿದರು.
ಕೋವಿಡ್ ಮೂರನೇ ಅಲೆಯೂ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಮಾಹಿತಿಯ ಹಿನ್ನೆಲೆ, ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಬೇಕು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಪೌಷ್ಟಿಕಾಂಶ ಆಹಾರ ಒದಗಿಸಬೇಕು ಎಂದರು.
ಪ್ರತಿಯೊಂದು ಇಲಾಖೆಯು ಸರ್ಕಾರದ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ಸಾರ್ವಜನಿಕರ ಮನೆ ಬಾಗಿಲಿಗೆ ಪ್ರಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡುವ ಮೂಲಕ ಆದರ್ಶ ಗ್ರಾಮದಡಿ ಆಯ್ಕೆಗೊಂಡಿರುವ ಗ್ರಾಮದ ಸ್ವರೂಪ ಬದಲಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್. ರವಿಕುಮಾರ್ ಅವರು ಮಾತನಾಡಿ ಗಣಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 8 ಗ್ರಾಮಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಯೋಜನೆ ಇದಾಗಿದ್ದು, ಇದಕ್ಕೆ ಪೂರಕವಾಗಿ ಆಯಾ ಇಲಾಖೆ ಅಡಿಯಲ್ಲಿ ಬರುವ ಯೋಜನೆಗಳ ಸೌಲಭ್ಯಗಳನ್ನು ಬಗ್ಗೆ ಪಟ್ಟಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 101 ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಜಾಗ ಮಂಜೂರಾಗಿದೆ, ಒಟ್ಟು 54 ತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿ ಪೂರ್ಣಗೊಂಡಿದ್ದು, 44 ದ್ರವ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಸ್ಥಳ ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರಲ್ಲದೆ, ಒಣಕಸ, ಹಸಿಕಸ ಬೇಪರ್ಡಿಸಿ ಹಸಿಕಸವನ್ನು ಹಿಂದಿರುಗಿಸಿ, ತಮ್ಮ ಹೊಲಗಳಿಗೆ ಅಗತ್ಯವಿರುವ ಗೊಬ್ಬರ ತಯಾರಿಕೆಗೆ ಬಳಸಿಕೊಳ್ಳಲು ತಿಳಿಸಲಾಗುವುದು ಹಾಗೂ ಒಣಕಸವನ್ನು ವಿಲೇವಾರಿ ಮಾಡಲಾಗುವುದು ಎಂದರು.
ಶುದ್ಧ ಕುಡಿಯುವ ನೀರು ಒದಗಿಸುವುದು ಇಲಾಖೆಯ ಜವಾಬ್ದಾರಿಯಾಗಿದ್ದು, ಇದರೊಂದಿಗೆ ಚರಂಡಿ, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಬೇಕು ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ತಪಾಸಣೆ ನಡೆಸಿ, ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ, ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 395 ಮಕ್ಕಳು ಶಾಲೆಗೆ ದಾಖಲಾಗಿ ಹೊರಗುಳಿದಿದ್ದು, ಇನ್ನೂ 192 ಮಕ್ಕಳು ಶಾಲೆಗೆ ದಾಖಲಾಗಿರುವುದಿಲ್ಲ ಎಂದರಲ್ಲದೆ, ಗಣಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಶಾಲೆಗೆ ಕರೆ ತರಬೇಕು ಹಾಗೂ ಗ್ರಾಮ ಪಂಚಾಯಿತಿಯ ಕ್ರಿಯಾ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಮುನಿಕೃಷ್ಣಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ಹೊಸಕೋಟೆ ತಹಶೀಲ್ದಾರ್ ಗೀತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..