ದೊಡ್ಡಬಳ್ಳಾಪುರ: ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 350 ನೇ ಆರಾಧನಾ ಮಹೋತ್ಸವವು ಕೊವಿಡ್ ಹಿನ್ನಲೆಯಲ್ಲಿ ಸರಳವಾಗಿ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ಆರಾಧನಾ ಮಹೋತ್ಸವದ ಅಂಗವಾಗಿ ರಾಯರ ಬೃಂದಾನವನಕ್ಕೆ ವಿಶೇಷ ಅಲಂಕಾರ, ಪೂಜಾ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕೊವಿಡ್-19 ಹಿನ್ನಲೆಯಲ್ಲಿ ಭಕ್ತಾದಿಗಳಿಗೆ ಅಂತರ ಕಾಪಾಡಿಕೊಳ್ಳುವ ಮೂಲಕ ಬೃಂದಾವನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ನಡೆಯಬೇಕಿದ್ದ ಸಂಗೀತ ಕಚೇರಿ, ಅನ್ನ ಸಂತರ್ಪಣೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಲಕ್ಕಸಂದ್ರದಲ್ಲಿ ಆರಾಧನೆ: ತಾಲೂಕಿನ ತೂಬಗೆರೆ ಹೋಬಳಿ ಲಕ್ಕಸಂದ್ರದಲ್ಲಿರುವ ಶ್ರೀ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನೆರವೇರಿತು. ಈ ಬಾರಿ ಕೊವಿಡ್ ಹಿನ್ನಲೆಯಲ್ಲಿ ಭಕ್ತರಿಗೆ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲದೇ ಮಠದ ಮಟ್ಟಿಗಷ್ಟೇ ನಡೆಯಿತು. ವೆಬ್‍ಸೈಟ್‍ನಲ್ಲಿ ಆರಾಧನೆಯ ನೇರ ಪ್ರಸಾರ ಮಾಡಲಾಯಿತು. ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ಹಾಗೂ ಇಲ್ಲಿನ ಪಂಚಮುಖಿ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ ನಡೆಯಿತು.
ಬಾಶೆಟ್ಟಿಹಳ್ಳಿಯಲ್ಲಿ ಆರಾಧನೆ: ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿರುವ 12 ವರ್ಷಗಳ ಹಿಂದೆಯಷ್ಟೇ ಸತ್ಯಾತ್ಮ ತೀರ್ಥರಿಂದ ಸ್ಥಾಪಿತವಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಬೃಂದಾವನ, ಸೀತಾರಾಮಾಂಜನೇಯ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….