ದೊಡ್ಡಬಳ್ಳಾಪುರ: ಪ್ರತಿ ಚುನಾವಣೆಯಲ್ಲಿ ಸ್ಪರ್ಧಿಗಳು ಮತದಾರನ ಓಲೈಕೆ ಸುದ್ದಿ, ಚುನಾವಣಾ ಆಯೋಗದ ಕ್ರಮ, ಮತ್ತಿತರ ಸುದ್ದಿಗಳೆ ನಮಗೆ ಕಾಣಿಸುವುದು. ಆದರೆ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಹಣ ನೀಡಿದವರು ಮಾತ್ರ ಚುನಾಯಿತರಾಗುವುದು ಎಂದು ಬಹಿರಂಗವಾಗಿ ಮತದಾರರೇ ಅಭ್ಯರ್ಥಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂಬ ಆತಂಕಕಾರಿ ಆರೋಪ ಕೇಳಿ ಬಂದಿದೆ.
ಸೆ.3 ರಂದು ನಡೆಯಲಿರುವ ನಗರಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್-31, ಬಿಜೆಪಿ-30, ಜೆಡಿಎಸ್-28, ಸಿಪಿಐ(ಎಂ)-2, ಬಿಎಸ್‍ಪಿ-3 , ಕನ್ನಡ ಪಕ್ಷ-5, ಕೆ.ಆರ್.ಎಸ್-2, ಉತ್ತಮ ಪ್ರಜಾಕೀಯ ಪಕ್ಷ-1, ಎಸ್.ಡಿ.ಪಿ.ಐ-2, ಹಾಗೂ ಪಕ್ಷೇತರರು 15 ಸೇರಿ 119 ಮಂದಿ ಕಣದಲ್ಲಿದ್ದಾರೆ.
ಎರಡುವರೆ ವರ್ಷಗಳ ನಂತರ ಜನಪ್ರತಿನಿದಿಗಳ ಕೈಗೆ ಅಧಿಕಾರ ಸಿಗಲಿದೆ., ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್, ಸಿಪಿಐ, ಬಿಎಸ್‍ಪಿ, ಕನ್ನಡ ಪಕ್ಷ, ಕೆ.ಆರ್.ಎಸ್, ಉತ್ತಮ ಪ್ರಜಾಕೀಯ ಪಕ್ಷ, ಎಸ್.ಡಿ.ಪಿ.ಐ, ಹಾಗೂ ಪಕ್ಷೇತರರು ಸ್ಪರ್ಧೆಗಿಳಿದಿದ್ದು ಚುನಾವಣೆ ಕಾವು ತೀವ್ರವಾಗಿದೆ.
ಪ್ರತೀ ಚುನಾವಣೆಯಲ್ಲಿ ಮತದಾರರ ಸೆಳೆಯಲು ಸ್ಪರ್ಧಿಗಳು ನಾನಾ ರೀತಿಯ ಕಾರ್ಯತಂತ್ರ ನಡೆಸುತ್ತಾರೆ. ಆದರೆ ಈ ಚುನಾವಣೆಯಲ್ಲಿ ಮತದಾರರೇ ಸ್ಪರ್ದಿಗಳು ಚುನಾಯಿತರಾಗಬೇಕಾದರೆ ಹಣ ವೆಚ್ಚ ಮಾಡಬೇಕು ಎಂದು ಹಲವು ವಾರ್ಡ್ ಗಳಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಅಳಲು ಸ್ಪರ್ದಿಸಿರುವ ಅಭ್ಯರ್ಥಿಗಳದ್ದಾಗಿದೆ.
ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಸಂಕಲ್ಪ, ಆದರೆ ಮತದಾನ ಮಾಡಲು ಹಣದ ಬೇಡಿಕೆ ಇಡುತ್ತಿರುವುದು ಇಡೀ ವ್ಯವಸ್ಥೆಗೆ ಆತಂಕ ಎದುರಾಗಿದೆ. ಚುನಾವಣೆ ಸಂದರ್ಭದಲ್ಲಿ ಮತದಾರನ ಸೆಳೆಯಲು ಅಭ್ಯರ್ಥಿಗಳು ವಿವಿಧ ಆಮಿಷ ಒಡ್ಡುವುದು ಕೇಳಿ ಬರುತ್ತವೆ. ಆದರೆ ಮತದಾರ ಹಣ ನೀಡಿದರೆ ಮಾತ್ರ ಮತ ನೀಡುತ್ತೇವೆ ಎನ್ನುವ ಮಟ್ಟಕ್ಕೆ ಇಳಿದಿರುವುದು ಅಭ್ಯರ್ಥಿಗಳನ್ನು ಆತಂಕಕ್ಕೆ ತಳ್ಳಿದೆ.
ಈ ಕುರಿತು ಹೆಸರೇಳಲು ಇಚ್ಚಿಸದ ಯುವ ಅಭ್ಯರ್ಥಿ ಹರಿತಲೇಖನಿಯೊಂದಿಗೆ ಮಾತನಾಡಿ, ಉತ್ತಮ ಕೆಲಸ ಮಾಡಬೇಕು, ನಗರವನ್ನು ಅಭಿವೃದ್ಧಿ ಮಾಡಬೇಕು ಎಂದು ಚುನಾವಣೆಗೆ ಸ್ಪರ್ಧಿಸಿದೆ. ಇಷ್ಟು ದಿನ ಅಧಿಕಾರಿಗಳು ಭ್ರಷ್ಟರು, ರಾಜಕಾರಣಿಗಳು ಭ್ರಷ್ಟರು ಎಂದು ಹೋರಾಟ ನಡೆಸುತ್ತಿದೆ ಆದರೆ ಮತದಾರನೆ ಭ್ರಷ್ಟನಾಗಿದ್ದಾನೆ ಎಂಬ ಅನುಮಾನ ಕಾಡುತ್ತಿದೆ. ಶೇ.75 ರಷ್ಟು ಜನ ಹಣ ನೀಡಿದರೆ ಮಾತ್ರ ಗೆಲ್ಲಲು ಸಾಧ್ಯ ಎಂದು ಬಹಿರಂಗವಾಗಿ ಹೇಳುತ್ತಿದ್ದು, ವ್ಯವಸ್ಥೆ ಹಾಳಾಗಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿ ಅನ್ವಯ ಈ ಚುನಾವಣೆಯಲ್ಲಿ ಗೆಲ್ಲಲು ಒಬ್ಬ ಅಭ್ಯರ್ಥಿ ಕನಿಷ್ಠ 25 ಲಕ್ಷ ಮೀಸಲಿಡಬೇಕು ಎನ್ನುವ ಸುದ್ದಿ ಹರಿದಾಡುತ್ತಿದೆ. ಮತ ಯಾಚನೆಗೆ ಓಡಾಡುವ ಪುರಯಷರಿಗೆ ಇಷ್ಟು, ಮಹಿಳೆಯರಿಗೆ ಇಷ್ಟು ಎಂದು ನೀಡಲೇ ಬೇಕಿದೆ. ಉಳಿದಂತೆ ಮದ್ಯದ ಅಮಲು ಪ್ರತಿ ನಿತ್ಯ ಏರಿಸಲೇ ಬೇಕಿದೆಯಂತೆ. ಅಲ್ಲದೆ ಒಂದು ಓಟಿಗೆ ಒಂದು ಸಾವಿರ ಎಂಬ ಅಘೋಷಿತ ವೆಚ್ಚಕ್ಕೆ ಗೆಲುವಿಗಾಗಿ ಪಣ ತೊಟ್ಟಿರುವ ಅಭ್ಯರ್ಥಿಗಳು ಸಿದ್ದರಾಗಿದ್ದಾರೆಂದು ಸುದ್ದಿ ಹರಿದಾಡುತ್ತಿತ್ತು, ಪ್ರತಿಷ್ಟಿತ ವಾರ್ಡ್ಗಳಲ್ಲಿ ಇದರ ವೆಚ್ಚ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.
ಪಾರದರ್ಶಕ ಚುನಾವಣೆ ನಡೆಸಲು ಅಧಿಕಾರಿಗಳು ಹಲವು ಕ್ರಮಕೈಗೊಂಡಿದ್ದಾರಾದರೂ, ರಂಗೋಲಿ ಕೆಳಗೆ ಅಕ್ರಮ ನಡೆಸುವ ಜನರ ತಡೆಯುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾನದ ಪಾವಿತ್ರತೆಯನ್ನು ಅರಿವುಂಟು ಮಾಡಬೇಕೆಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..