ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಗೆ ಬರುವ 11ನೇ ವಾರ್ಡ್ ನಲ್ಲಿ ಅವೈಜ್ಞಾನಿಕ ಮತದಾರರ ಪಟ್ಟಿಯನ್ನು ಮಾಡಿರುವ ಪರಿಣಾಮ 1,544 ಜನ ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದು, ಈ ಹಿಂದಿನ ಮತದಾರರ ಪಟ್ಟಿಯನ್ನೇ ನಗರಸಭೆ ಚುನಾವಣೆಯಲ್ಲೂ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಆ.30ರಂದು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಮತದಾರರಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಕರೇನಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿ ಮುಖಂಡರು ತಿಳಿಸಿದ್ದಾರೆ.
ಕರೇನಹಳ್ಳಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡರಾದ ದ್ರುವಕುಮಾರ್, ಪಿ.ಎ.ವೆಂಕಟೇಶ್, 11ನೇ ವಾರ್ಡ್ ಕರೇನಹಳ್ಳಿ-1 ಗಡಿ ವಿಂಗಡನೆ ಅವೈಜ್ಞಾನಿಕವಾಗಿದ್ದು, ನಗರಸಭೆಗೆ ಸೇರಬೇಕಿದ್ದ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿದ್ದು, ಇಲ್ಲಿ 1010 ಮತದಾರರಿದ್ದಾರೆ.
ಈ ಹಿಂದೆ ವಾರ್ಡ್‍ನಲ್ಲಿ 2544 ಮತದಾರರಿದ್ದರು. ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸದೇ ಬೇಕಾಬಿಟ್ಟಿ ಮಾಡಿದ ಅವೈಜ್ಞಾನಿಕ ಗಡಿ ವಿಂಗಡನೆಯಿಂದಾಗಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿದ್ದು, 1,544 ಜನ ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.
ಒಂದೊಂದು ಬಾರಿ ಒಂದೊಂದು ರೀತಿ ಮತದಾರರ ಪಟ್ಟಿ ಮಾಡಿ ಪ್ರತಿ ಚುನಾವಣೆಯಲ್ಲಿಯೂ ಇಲ್ಲಿ ಮತದಾರರ ಪಟ್ಟಿಯದ್ದೇ ಗೊಂದಲವಾಗುತ್ತಿದೆ. ಈ ಕುರಿತು ಕರೇನಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಕುರಿತು ರಾಜ್ಯ ಹೈಕೋರ್ಟ್ ನೀಡಿರುವ ಸೂಚನೆಯ ಪ್ರತಿಯನ್ನು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ನೀಡುವ ಮೂಲಕ ನಮ್ಮ ಮನವಿ ಸಲ್ಲಿಸಲಾಗಿದೆ. ಪಕ್ಷಾತೀತವಾಗಿ ಇಲ್ಲಿನ ಎಲ್ಲಾ ರಾಜಕೀಯ ಮುಖಂಡರು ಈ ಬಗ್ಗೆ ಒತ್ತಾಯಿಸುತ್ತಿದ್ದಾರೆ. ಆದರೂ ಮತದಾರರು ಮತದಾನದಿಂದ ವಂಚಿತರಾಗಿರುವ ಬಗ್ಗೆ ಅಕಾರಿಗಳು ಕ್ರಮ ಕೈಗೊಂಡಿಲ್ಲ. ಮತದಾರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಆ.30ರಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಲಾಗುವುದು ಎಂದರು.
ಒಂದು ಕುಟಂಬದಲ್ಲಿ ಗಂಡ -ಹೆಂಡತಿ, ಅಪ್ಪ – ಮಗ ಮೊದಲಾಗಿ ಗ್ರಾಮ ಪಂಚಾಯಿತಿಯಲ್ಲಿ ಒಬ್ಬರದು, ನಗರಸಭೆಗೆ ಒಬ್ಬರದು ಮತಗಳು ಸೇರಿಕೊಂಡಿವೆ.
ದರ್ಗಾಗೋಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಯೂ ನಮ್ಮನ್ನು ಪರಿಗಣಿಸಿಲ್ಲ. ನಗರಸಭೆಯಲ್ಲಿಯೂ ನಮ್ಮ ಮತವಿಲ್ಲ. ಈಗ ಮತದಾನದಿಂದ ವಂಚಿತರನ್ನಾಗಿ ಮಾಡುವವರು ಮುಂದೆ ನಮ್ಮ ಆಧಾರ್, ಪಡಿತರ ಚೀಟಿಗಳನ್ನು ತೆಗೆಯುತ್ತಾರೆ ಎನ್ನುವ ಆತಂಕ ಮೂಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಆಗುವವರಿಗೆ ಚುನಾವಣೆ ತಡೆ ಹಿಡಿಯಬೇಕು. ಈ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ನಮಗೆ ಮತದಾನದ ಹಕ್ಕು ನೀಡಬೇಕೆಂದು ನೆರೆದಿದ್ದ ಮತದಾರರು ಆಗ್ರಹಿಸಿದರು.
ಸಭೆಯಲ್ಲಿ ಕರೇನಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿಯ ಮಲ್ಲೇಶ್,ಲಕ್ಷ್ಮೀನಾರಾಯಣ್, ಕಮಲೂರು ಸೀನಪ್ಪ, ಅಶೋಕ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……