ದೊಡ್ಡಬಳ್ಳಾಪುರ: ತಾಲೂಕಿನ ಸಂಕರಸನಹಳ್ಳಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ್ದ ಫುಡ್ ಪಾಯಿಸನ್ ಪ್ರಕರಣ ತಿರುವು ಪಡೆದಿದ್ದು, ವೈದ್ಯರ ಆಕ್ಷೇಪದ ನಡುವೆಯೂ ಚಿಕಿತ್ಸೆಗೆ ದಾಖಲಾಗಿದ್ದ 15 ಮಂದಿ ಕೂಲಿ ಕಾರ್ಮಿಕರು ವೈದ್ಯರಿಗೆ ಪತ್ರ ಬರೆದುಕೊಟ್ಟು ಸ್ವಗ್ರಾಮಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.
ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಸಂಕರಸನಹಳ್ಳಿ ಗ್ರಾಮದಲ್ಲಿ ಹೂವನ್ನು ಬಿಡಿಸಲು ಬಂದಿದ್ದ ಕೊರಟಗೆರೆ ತಾಲೂಕಿನ ಎಂ.ಗೊಲ್ಲಹಳ್ಳಿ ಮೂಲದ 20 ಮಂದಿ ಕಾರ್ಮಿಕರು ಮಧ್ಯಾಹ್ನ ಹೋಟೆಲ್ ನಿಂದ ತಂದು ನೀಡಿದ ಊಟ ಮಾಡಿದ ನಂತರ 05 ಮಂದಿ ತಲೆ ಸುತ್ತಿ ಬಿದ್ದರೆ, ವಾಂತಿ ಕಾರಣ ಇನ್ನೈದು ಮಂದಿ ಅನಾರೋಗ್ಯಕ್ಕೀಡಾಗಿದ್ದರು.
ಊಟದ ನಂತರ ಏಕಾಏಕಿ 10 ಮಂದಿ ಅನಾರೋಗ್ಯಕ್ಕೆ ಈಡಾದ ಕಾರಣ ಕೊನೇನಹಳ್ಳಿಯ ಸರ್ಕಾರಿ ಆಸ್ಪತ್ರೆ ತೆರಳಿದ್ದು, ಅಲ್ಲಿನ ವೈದ್ಯಕೀಯ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ ದೊಡ್ಡಬಳ್ಳಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕಳಿಸಿದ್ದರು. ಈ ವೇಳೆ ಮತ್ತೈದು ಮಂದಿ ಸೇರಿ ಒಟ್ಟು 15 ಮಂದಿ ನಗರದ ಸಾರ್ವಜನಿಕ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಸಂಜೆ ಏಕಾಏಕಿ ಚಿಕಿತ್ಸೆಗೆ ದಾಖಲಾಗಿದ್ದ ಅಷ್ಟು ಕೂಲಿ ಕಾರ್ಮಿಕರು ಸ್ವಗ್ರಾಮಗಳಿಗೆ ತೆರಳುವುದಾಗಿ ಪಟ್ಟು ಹಿಡಿದಿದ್ದು, ವೈದ್ಯರು ನಿಗಾವಹಿಸಬೇಕು ಎಂದು ಸಲಹೆ ನೀಡಿದರು ಕೇಳದೆ ನಮ್ಮ ಆರೋಗ್ಯಕ್ಕೆ ನಾವೇ ಹೊಣೆಯೆಂದು ಪತ್ರ ಬರೆದುಕೊಟ್ಟು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತೆರಳಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಊಟದ ನಂತರ ಕೂಲಿ ಕಾರ್ಮಿಕರಲ್ಲಿ ದಿಢೀರ್ ಉಂಟಾದ ಅನಾರೋಗ್ಯಕ್ಕೆ ಹೋಟೆಲ್ ನಿಂದ ತಂದ ಊಟ ಕಾರಣವೇ ಅಥವಾ ಹೂವಿನ ಗಿಡಗಳಿಗೆ ಸಿಂಪಡಿಸಿದ್ದ ಔಷಧ ಕಾರಣವೇ ಎಂದು ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದರೆ, ಏಕಾಏಕಿ ಕೂಲಿ ಕಾರ್ಮಿಕರು ಆಸ್ಪತ್ರೆಯಿಂದ ಸ್ವಗ್ರಾಮಗಳಿಗೆ ತೆರಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..