ದೊಡ್ಡಬಳ್ಳಾಪುರ: ತಾಲೂಕಿನಾದ್ಯಂತ ಮನೆಗಳಲ್ಲಿ ಹಾಗೂ ವಿವಿಧ ಗಣೇಶೋತ್ಸವ ಸಮಿತಿಗಳ ನೇತೃತ್ವದಲ್ಲಿ ಗಣೇಶೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸರ್ಕಾರದ ಮಾರ್ಗಸೂಚಿ ಪ್ರಕಾರ ನಾಲ್ಕು ಅಡಿಗಿಂತಲೂ ಹೆಚ್ಚು ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿಲ್ಲದಿರುವುದರಿಂದ ಸಾಕಷ್ಟು ಸಂಘಟನೆಗಳು ಎಲ್ಲೆಡೆ ಪುಟ್ಟ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದವು.
ದೇವರಾಜನಗರದ ಸರ್ವಸಿದ್ದಿವಿನಾಯ ಗೆಳೆಯರ ಬಳಗ, ಬೆಸ್ತರ ಪೇಟೆಯಲ್ಲಿ ಬಜರಂಗದಳದ ಸ್ವಾಮಿ ವಿವೇಕಾನಂದ ಘಟಕ, ಭುವನೇಶ್ವರಿನಗರದ ಶ್ರೀ ನವಜ್ಯೋತಿ ವಿನಾಯಕ ಗೆಳೆಯರ ಬಳಗ, ತೇರಿನಬೀದಿಯ ಶ್ರೀ ವಿನಾಯಕ ಮಿತ್ರ ಬಳಗ ( ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಂದ್ರ ಶೇಖರ್ ಆಜಾದ್ ಘಟಕ ), ಕನಕದಾಸ ರಸ್ತೆಯ ಶ್ರೀ ಗೌರಿಪುತ್ರ ಗಜಾನನ ಗೆಳೆಯರ ಬಳಗ, ದೊಡ್ಡತುಮಕೂರಿನ ರೇಣುಕಾಯಲ್ಲಮ್ಮ ವಿನಾಯಕ ಬಳಗ, ಗುಂಡಮಗೆರೆಯ ವಾಲ್ಕೀಕಿ ಯುವರ ಸಂಘ, ಮಾರಿಮುತ್ತು ಯುವಕರ ಸಂಘ ಸೇರಿದಂತೆ ವಿವಿಧ ಸಮಿತಿಗಳು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ಇಲ್ಲದ ಅಬ್ಬರ: ಗಣಪತಿ ತರುವ ವೇಳೆ ಯಾವುದೇ ಡಿಜೆ ಸದ್ದು, ಮೈಕ್‌ಗಳ ಅಬ್ಬರ ಕಂಡುಬರಲಿಲ್ಲ. ಶಾಮಿಯಾನ, ಸಮುದಾಯ ಭವನ, ಸೇರಿ ಖಾಲಿ ಜಾಗದಲ್ಲಿ ಸಣ್ಣ ಪೆಂಡಾಲ್ ಹಾಕಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು.
ಪ್ರತಿ ಬಾರಿ ಪೆಂಡಾಲ್‌ಗೆ ಅತಿ ಹೆಚ್ಚು ಹಣ ಹಾಕಿ ಅಲಂಕಾರ ಮಾಡುತ್ತಿದ್ದವರು ಈ ಬಾರಿ ಯಾವುದೇ ಅಲಂಕಾರ ಮಾಡಿರಲಿಲ್ಲ. ಸೀರಿಯಲ್ ಸೆಟ್, ಫೋಕಸ್ ಲೈಟಿಂಗ್ಸ್, ಪೆಂಡಾಲ್‌ಗೆ ವಿಜೃಂಭಣೆ ಅಲಂಕಾರ ಇದ್ಯಾವುದು ಇರಲಿಲ್ಲ. ಗಣಪತಿ ತರುವ ವೇಳೆ ಕಡಿಮೆ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದರು. ಹಿಂದಿನ ವರ್ಷದಂತೆ ಪ್ರಸಾದ ವಿನಿಯೋಗ ಇರಲಿಲ್ಲ.
ದೊಡ್ಡಬಳ್ಳಾಪುರ ನಗರಸಭೆಯಲ್ಲಿ 40, ಕಸಬಾ ಮತ್ತು ತೂಬಗೆರೆ ವ್ಯಾಪ್ತಿಯಲ್ಲಿ 96, ದೊಡ್ಡಬೆಳವಂಗಲ ಮತ್ತು ಮಧುರೆ ವ್ಯಾಪ್ತಿಯಲ್ಲಿ 50 ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ಸೇರಿದಂತೆ ಒಟ್ಟು 206 ಗಣೇಶೋತ್ಸವಗಳಿಗೆ ಅನುಮತಿ ನೀಡಲಾಗಿತ್ತು.
ನಗರದ ಡಿ.ಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಸಮೀಪದ ನಾಗರಕೆರೆ ಅಂಚಿನಲ್ಲಿ ಸಾಮೂಹಿಕ ವಿಸರ್ಜನೆಗಾಗಿ ನಗರಸಭೆಯಿಂದ ವಿಶೇಷ ಹೊಂಡದ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ನಗರಸಭೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಜರಿದ್ದು, ಗಣೇಶ ಮೂರ್ತಿ ವಿಸರ್ಜನೆ ಮಾಡಲು ಸಹಕರಿಸುತ್ತಿದ್ದಾರೆ.
ಇದರೊಂದಿಗೆ ಮೂರು ಡ್ರಮ್‍ಗಳನ್ನು ಒಳಗೊಂಡ ನಾಲ್ಕು ಟ್ರ್ಯಾಕ್ಟರ್‍ಗಳು ನಗರದ ವಿವಿದೆಡೆ ಸಂಚರಿಸುತ್ತಿದ್ದು, ಮನೆಯಲ್ಲಿ ಪ್ರತಿಷ್ಟಾಪಿಸುವ ಗಣೇಶ ಮೂರ್ತಿಗಳನ್ನು ಸಂಚಾರಿ ವಾಹನಗಳಲ್ಲಿಯೇ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..