ದೊಡ್ಡಬಳ್ಳಾಪುರ: ತಾಲ್ಲೂಕಿನ ಅರ್ಕಾವತಿ ನದಿ ಪಾತ್ರದಲ್ಲಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ರಾಜಘಟ್ಟ ಕೆರೆ ಅಂಗಳ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಕ್ಕೆ ಸಮೀಪವೇ ಇರುವ ರಾಜಘಟ್ಟ ಕೆರೆ ಅಂಗಳಕ್ಕೆ ಹೋಟೆಲ್, ಮಾಂಸದ ಅಂಗಡಿಗಳಲ್ಲಿನ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಸುರಿಯಲಾಗುತ್ತಿದೆ. ಅದರಲ್ಲೂ ಕೋಳಿ ಅಂಗಡಿಗಳ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ರಾಶಿ ಹಾಕಲಾಗುತ್ತಿದೆ. ಇದರಿಂದ ಕೆರೆ ಸುತ್ತಮುತ್ತಲಿನ ತೋಟ, ಮನೆಗಳಲ್ಲಿ ವಾಸಮಾಡುವುದೇ ದುಸ್ಥರವಾಗಿದೆ. ಕೋಳಿ ತ್ಯಾಜ್ಯ ತಿನ್ನಲು ನಾಯಿಗಳು ಹಿಂಡು ಹಿಂಡಾಗಿ ಬರುತ್ತಿವೆ. ನಾಯಿಗಳ ಗುಂಪು ಕುರಿ, ಹಸುಗಳ ಮೇಲೆ ದಾಳಿ ನಡೆಸಿ ಕಚ್ಚಿಹಾಕುತ್ತಿವೆ ಎಂದು ದೂರಿರುವ ರಾಜಘಟ್ಟ ನಿವಾಸಿ ಚಂದನ್ ಗೌಡ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಹಲವಾರು ಕಾರ್ಖಾನೆಗಳವರು ರಾಸಾಯನಿಕ ಯುಕ್ತ ನೀರನ್ನು ಟ್ಯಾಂಕರ್ಗಳಲ್ಲಿ ರಾತ್ರಿ ಸಮಯದಲ್ಲಿ ತಂದು ಬಿಡುತ್ತಿದ್ದಾರೆ. ಇದರಿಂದ ಕೆರೆಯಲ್ಲಿ ಸಂಗ್ರಹವಾಗಿರುವ ಅಲ್ಪಸ್ವಲ್ಪ ಮಳೆ ನೀರು ಸಹ ಕಲುಷಿತವಾಗುತ್ತಿವೆ. ರಾಸಾಯನಿಕ ಯುಕ್ತ ನೀರು ಬಿಟ್ಟಿರುವ ಸ್ಥಳದಲ್ಲಿ ಹುಲ್ಲು ಸಹ ಬೆಳೆಯದೆ ಸುಟ್ಟು ಹೋಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಯಾವುದೆ ಎಚ್ಚರ ವಹಿಸುತ್ತಿಲ್ಲ ಎಂದು ದೂರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..