ದೊಡ್ಡಬಳ್ಳಾಪುರ: ಸಾಹಸ ಸಿಂಹ, ಅಭಿನವ ಭಾರ್ಗವ, ದಾದಾ, ಹೀಗೆ ನಾನಾ ಹೆಸರಿನಿಂದ ಅಭಿಮಾನಿಗಳ ಆರಾಧ್ಯದೈವರಾಗಿದ್ದ ದಿವಂಗತ ಡಾ.ವಿಷ್ಣುವರ್ಧನ್ ಅವರ 71ನೇ ಹುಟ್ಟು ಹಬ್ಬವನ್ನು ನಗರದ ರಾಜೀವ್ ಗಾಂಧಿ ಕಾಲೋನಿಯಲ್ಲಿ ಅಭಿಮಾನಿಗಳು ಎರಡು ಅಂಗನವಾಡಿ ಕೇಂದ್ರಗಳಿಗೆ ವಾಟರ್ ಫಿಲ್ಟರ್ ಘಟಕಗಳನ್ನು ಹಸ್ತಾಂತರ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಡಿ.ವಿ.ಅಶ್ವತ್ಥಪ್ಪ, ನಟ ವಿಷ್ಣುವರ್ಧನ್ ಅವರ ಬದುಕಿನಲ್ಲಿ ಎಷ್ಟೇ ಕಷ್ಟಬಂದರೂ ಧೈರ್ಯದಿಂದ ಎದುರಿಸುತ್ತಿದ್ದರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅನೇಕ ಮೌಲ್ಯಗಳನ್ನು ಹೇಳಿಕೊಟ್ಟಿದ್ದಾರೆ. ಅವರ ಬದುಕು ಇಂದಿನ ಯುವ ಜನಾಂಗಕ್ಕೆ ಪ್ರೇರಣೆ. ಹಾಗಾಗಿ ಜನಮಾನಸದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿದಿದೆ. ಕೆಲಸದಲ್ಲಿನ ಅವರ ಶ್ರದ್ಧೆ, ನಂಬಿಕೆ, ವಿಶ್ವಾಸದಿಂದ ಎತ್ತರಕ್ಕೆ ಬೆಳೆದಿದ್ದಾರೆ. ವಿಷ್ಣುವರ್ಧನ್ ಅವರ ಪ್ರತಿ ಸಿನಿಮಾದಲ್ಲೂ ಸಾಮಾಜಿಕ ಕಳಕಳಿ ಮಾದರಿಯಾಗುತ್ತಿತ್ತು ಎಂದರು.
ಇದೇ ವೇಳೆ 100ಕ್ಕೂ ಹೆಚ್ಚು ಮಕ್ಕಳಿರುವ ಎರಡು ಅಂಗನವಾಡಿ ಕೇಂದ್ರಗಳಿಗೆ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಅವರು ಮಕ್ಕಳ ಆರೋಗ್ಯ ಹಾಗೂ ಶುದ್ಧ ಕುಡಿಯುವ ನೀರು ದೊರೆಯಲಿ ಎಂಬ ಉದ್ದೇಶ ನೀರು ಶುದ್ಧಿಕರಣ ಘಟಕಗಳನ್ನು ನೀಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಮುಖಂಡ ಅರವಿಂದ್, ಮಾತನಾಡಿ ಹಿರಿಯ ಕಲಾವಿದನ ನೆನಪಲ್ಲಿ ಕೇವಲ ಆರ್ಕೆಸ್ಟ್ರಾ, ಪಟಾಕಿ ಎಂದು ದುಂದುವೆಚ್ಚ ಮಾಡುವ ಬದಲಾಗಿ ಅಂಗನವಾಡಿ ಕೇಂದ್ರಗಳಿಗೆ ವಾಟರ್ ಫಿಲ್ಟರ್ ನೀಡಿರುವುದು ಡಾ.ವಿಷ್ಣುವರ್ಧನ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸಿನಿಮಾ ಕಲಾವಿದ ಅಂಜಿ, ಮುತ್ತುರಾಜ್, ಸುರೇಶ, ಗೋವಿಂದಾಚಾರಿ, ಜಗನ್ನಾಥ, ಮನೋಜ್ ಕುಮಾರ, ಗಿರೀಶ್ ಕುಮಾರ್, ಸಾಯಿನಾಥ್, ವೆಂಕಟೇಶ್, ನಾಗರಾಜು, ಅಭಿಷೇಕ್, ಅಶೋಕ್, ಪರಮೇಶ್ ಮತ್ತಿತ್ತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..