ಹಾವೇರಿ: ಇತ್ತೀಚಿನ ದಿನಗಳಲ್ಲಿ ಆರೋಗ್ಯದ ದೃಷ್ಠಿಯಿಂದ ಸಿರಿಧಾನ್ಯಗಳ ಬಳಕೆ ಹೆಚ್ಚಾಗಿದ್ದು, ಇದರ ಉತ್ಪಾದನೆಗೂ ಸಹ ಹೆಚ್ಚು ಮಹತ್ವ ನೀಡುವುದು ಅವಶ್ಯಕವಾಗಿದೆ ಎಂದು ಹನುಮನಮಟ್ಟಿ ಕೃಷಿ ಮಹಾ ವಿದ್ಯಾಲಯ ಡೀನ್ (ಕೃಷಿ) ಹಾಗೂ ಆವರಣ ಮುಖ್ಯಸ್ಥ ಡಾ. ಆರ್. ಬಸವರಾಜಪ್ಪ ಹೇಳಿದರು.
ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಇಫ್ಕೋ ಲಿಮಿಟೆಡ್ ಹಾವೇರಿ ಇವರ ಸಹಯೋಗದಲ್ಲಿ ಶುಕ್ರವಾರ ಹನುಮನಮಟ್ಟಿಯಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ-2023ರ ಅಂಗವಾಗಿ ಪೌಷ್ಟಿಕ ಕೈತೋಟ ಮತ್ತು ವೃಕ್ಷಾರೋಪಣಾ ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೊಪ್ಪಿನ ತರಕಾರಿ, ಗೆಡ್ಡೆ ಗೆಣಸುಗಳು, ಬಳ್ಳಿ ಜಾತಿಯ ತರಕಾರಿಗಳ ಬಳಕೆ ಜೊತೆಗೆ ಹಣ್ಣುಗಳನ್ನು ಸಹ ದಿನನಿತ್ಯ ಆಹಾರದಲ್ಲಿ ಸೇವಿಸಬೇಕು. ಈ ದೃಷ್ಠಿಯಲ್ಲಿ ಇದರ ಬಗ್ಗೆ ಅರಿವು ಮೂಡಿಸಲು 2023ರನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ಜೊತೆಗೆ ಹಣ್ಣಿನ ಸಸಿಗಳ ನಾಟಿ ಮಾಡುವ ಆಂದೋಲನವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.
ಕೃಷಿ ವಿಜ್ಞಾನ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಡಾ. ಅಶೋಕ ಪಿ ಮಾತನಾಡಿ, ಸಣ್ಣ ರೈತರು ಕಡಿಮೆ ಅವಧಿಯ ಮತ್ತು ಒಣ ಪ್ರದೇಶಕ್ಕೆ ಸೂಕ್ತವಾದ ಸಿರಿಧಾನ್ಯಗಳ ಉತ್ಪಾದನೆಗೆ ಹೆಚ್ಚು ಒತ್ತುಕೊಡಬೇಕು. ಜೊತೆಗೆ ಮನೆಯ ಸುತ್ತಮುತ್ತ ಪೌಷ್ಟಿಕ ಕೈತೋಟಗಳನ್ನು ನಿರ್ಮಿಸಿಕೊಳ್ಳುವುದರಿಂದ ಉತ್ತಮ ಆದಾಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಇಪ್ಕೋ ಲಿಮಿಟೆಡ್ ಹಾವೇರಿ ಕ್ಷೇತ್ರ ಅಧಿಕಾರಿ ನಾಗರಾಜ ಕರಿಗಾರ ಮಾತನಾಡಿ, ಇಪ್ಕೋ ಸೋಸ್ಶೆಟಿಯ ರೈತರಿಗೆ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸಲು ಉಚಿತವಾಗಿ ತರಕಾರಿ ಬೀಜಗಳ ಕಿಟ್ ಮತ್ತು ಹಣ್ಣು ಮತ್ತು ತರಕಾರಿ ಸಸಿಗಳನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ರೈತರು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ವಿಧ್ಯಾರ್ಥಿನಿಯರಿಗೆ, ರೈತ ಮಹಿಳೆಯರಿಗೆ ಮತ್ತು ರೈತರಿಗೆ ತರಕಾರಿ ಬೀಜದಕಿಟ್, ಹಣ್ಣು ಮತ್ತು ತರಕಾರಿ ಸಸಿಗಳನ್ನು ವಿತರಿಸಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಗೇರಿನ ಸಸಿಗಳನ್ನು ನಾಟಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಧಾರವಾಡದ ಮೀನು ವಿಜ್ಞಾನ, ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಡಾ. ಬಸವಕುಮಾರ ಕೆ.ವಿ, ಕಜ್ಜರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ ಚಿಕ್ಕಪ್ಪ ಮೊಟೇಬೆನ್ನೂರ, ಹನುಮನಮಟ್ಟಿ ಕೆ.ಎಲ್.ಇ., ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ. ಜೆ. ಎಮ್.ಖಾನಪೇಟ್ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..