ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾಕಳಿದುರ್ಗ ಬೆಟ್ಟಕ್ಕೆ ಹತ್ತಲು ಬರುವ ಪ್ರವಾಸಿಗರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬಂದಿವೆ.
ಈ ಬಗ್ಗೆ ಮಾಹಿತಿ ನೀಡಿರುವ ದೊಡ್ಡಬಳ್ಳಾಪುರದ ಶಾಂತಿನಗರ ನಿವಾಸಿ ವಿಶ್ವನಾಥ್,ಅರಣ್ಯ ಇಲಾಖೆ ಮಾಕಳಿ ದುರ್ಗ ಬೆಟ್ಟವನ್ನು ಇಕೋ ಟ್ಯೂರಿಸಂ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಬೆಟ್ಟಕ್ಕೆ ಹೋಗುವವರು ಆನ್ಲೈನ್ನಲ್ಲಿ ಹಣ ಪಾವತಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಇಂತಹವರಿಗೆ ಮಾತ್ರ ಬೆಟ್ಟ ಹತ್ತಲು ಪ್ರವೇಶ ನೀಡಲಾಗುತ್ತಿದೆ. ಇದಕ್ಕಾಗಿಯೇ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬೆಟ್ಟದ ತಪ್ಪಲಿನಲ್ಲಿಯೇ ನೇಮಕ ಮಾಡಿದ್ದಾರೆ. ಆದರೆ ಸಾಕಷ್ಟು ಜನರಿಗೆ ಆನ್ಲೈನ್ಲ್ಲಿ ನೋಂದಣಿ ಮಾಡಿಕೊಂಡು ಬರುವ ಬಗ್ಗೆ ಮಾಹಿತಿ ಇಲ್ಲ. ಇದರಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಸಾಕಷ್ಟು ಜನ ಭಾನುವಾರ ಬೆಟ್ಟ ಹತ್ತಲು ಬರುತ್ತಾರೆ. ಇಂತಹ ಪ್ರವಾಸಿಗರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಣ ವಸೂಲಿ ಮಾಡುತ್ತಾರೆ. ಆದರೆ ಹಣ ಪಡೆದಿರುವುದಕ್ಕೆ ಯಾವುದೇ ರಶೀದಿಯನ್ನು ನೀಡುತ್ತಿಲ್ಲ.
ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳದೇ ಬೆಟ್ಟ ಹತ್ತಲು ಬರುವ ಪ್ರವಾಸಿಗರಿಂದ ಪಡೆಯುವ ಹಣಕ್ಕೆ ಸೂಕ್ತ ರಶೀದಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಾಗೆಯೇ ಬೆಟ್ಟ ಹತ್ತಲು ಪ್ರಥಮ ಬಾರಿಗೆ ಬರುವವರಿಗೆ ಸೂಕ್ತ ರೀತಿಯ ಮಾರ್ಗದರ್ಶನ ಮಾಡುವ ಸೌಲಭ್ಯವನ್ನು ಕಲ್ಪಿಸಬೇಕು.
ಅರಣ್ಯ ಇಲಾಖೆ ಪಡೆಯುವ ಶುಲ್ಕಕ್ಕೆ ಕನಿಷ್ಠ ಸೌಲಭ್ಯವನ್ನು ನೀಡಬೇಕು. ಮಾಕಳಿ ದುರ್ಗ ಬೆಟ್ಟಕ್ಕೆ ಹತ್ತಲು ಯಾವುದೇ ಮೆಟ್ಟಿಲಿನ ಸೌಲಭ್ಯ ಇಲ್ಲ. ಹೀಗಾಗಿ ಬೆಟ್ಟ ಹತ್ತುವಾಗ ಹೊಸಬರು ದಾರಿ ತಪ್ಪುವುದು ಸಾಮಾನ್ಯ. ಇದರಿಂದಾಗಿ ಬಂಡೆಗಳ ನಡುವೆ ಸಿಕ್ಕಿಹಾಕಿಕೊಳ್ಳುವ ಅಪಾಯಗಳು ಇವೆ. ಅರಣ್ಯ ಇಲಾಖೆ ಹಣ ಪಡೆದಷ್ಟೇ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……