ಯಲಹಂಕ: ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದ ಯೋಧರೊಬ್ಬರು ವಯೋ ಸಹಜ ಕಾಯಿಲೆಯಿಂದ ಮನೆಯನ್ನು ಮರೆತಿದ್ದು, ರಾಜನುಕುಂಟೆ ಪೊಲೀಸರ ಸಮಯ ಪ್ರಜ್ಞೆಯಿಂದ ಕ್ಷೇಮವಾಗಿ ಮರಳಿ ಮನೆಗೆ ತಲುಪಿದ್ದಾರೆ.
1971ರ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಬಾಲಚಂದ್ರನ್ (89 ವರ್ಷ) ಅವರು ಭಾಗವಹಿಸಿ ನಿವೃತ್ತರಾಗಿ, ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ನಿವೃತ್ತ ಜೀವನ ನಡೆಸುತ್ತಿದ್ದರು. ಆದರೆ ವಾಯುವಿಹಾರಕ್ಕೆಂದು ಮನೆಯಿಂದ ಹೊರಬಂದ ವೇಳೆ ವಯೋ ಸಹಜ ಮರೆವಿನ ಕಾರಣ ಮನೆಯ ವಿಳಾಸವನ್ನು ಮರೆತಿದ್ದು, ಮೂರು ದಿನಗಳ ಕಾಲ ಮನೆಗೆ ತಲುಪಲು ಪ್ರಯತ್ನಿಸಿ ವಿಫಲರಾಗಿ ಅಲ್ಲಿ ಇಲ್ಲಿ ಸುತ್ತಾಡುತ್ತಾ ರಾಜನುಕುಂಟೆ ಪೊಲೀಸ್ ಠಾಣೆಗೆ ತಲುಪಿದ್ದಾರೆ.
ಪೊಲೀಸ್ ಠಾಣೆಗೆ ಬಂದ ಬಾಲಚಂದ್ರನ್ ಅವರ ತೊದಲು ಭಾಷೆ ಅರ್ಥವಾಗದೆ ಅವರು ಬಂದ ಕಾರಣ. ಸಮಸ್ಯೆ ಏನೆಂದು ತಿಳಿಯಲು ಪೊಲೀಸರು ಪರದಾಡುವಂತಾಗಿತ್ತು.
ಬಾಲಚಂದ್ರನ್ ಹಸಿವು ಮತ್ತು ದಾಹದಿಂದ ಬಳಲುತ್ತಿದ್ದನ್ನು ಅರ್ಥೈಸಿಕೊಂಡ ಪಿಎಸ್ಐ ಭವಿತಾ ಹಾಗೂ ಸಿಬ್ಬಂದಿಗಳು ಉಪಚರಿಸಿದ್ದು, ನಂತರ 2 ಗಂಟೆಗಳ ಕಾಲ ಕೌನ್ಸೆಲಿಂಗ್ ನೀಡಿದ ನಂತರ ವಿಳಾಸ ಪತ್ತೆ ಹಚ್ಚಿ, ಮಗನನ್ನು ಕರೆಸಿ ಅವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಚಂದ್ರನ್ ಪುತ್ರ ಮೇನನ್ ಕೂಡ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಬಾಲಚಂದ್ರನ್ ಲಕಾಣೆಯಾಗಿರುವ ಕುರಿತಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರನ್ನು ನೀಡಿದ್ದರು.
ನಿವೃತ್ತ ಯೋಧರನ್ನು ಮರಳಿ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದ ಸಬ್ ಇನ್ಸ್ಪೆಕ್ಟರ್ ಭವಿತಾ, ಸಿಬ್ಬಂದಿಗಳಾದ ಮೂರ್ತಿ, ಮಂಜುನಾಥ್ ಅವರ ಕಾರ್ಯಕ್ಕೆ ಬಾಲಚಂದ್ರನ್ ಅವರ ಪುತ್ರ ಅಭಿನಂದನೆ ಸಲ್ಲಿಸಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪೊಲೀಸರ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……