ದೊಡ್ಡಬಳ್ಳಾಪುರ: ಹಿರಿಯ ನಟ-ನಿರ್ದೇಶಕ ಟಿ.ಎನ್.ಸೀತಾರಾಮ್ ಎಂದರೆ ಸಾಕು ವಿಭಿನ್ನ ಶೈಲಿಯ, ಗಟ್ಟಿ ಕಥಾ ಹಂದರದ ಧಾರವಾಹಿಗಳು, ಸಿನಿಮಾಗಳು ಕಣ್ಣ ಮುಂದೆ ಬರುತ್ತವೆ. “ಮಾಯಾಮೃಗ, ಮುಕ್ತ ಮುಕ್ತ” ಮತ್ತು ಈಗ ಪ್ರಸಾರವಾಗುತ್ತಿರುವ ‘ಮಗಳು ಜಾನಕಿ’ ಧಾರವಾಹಿಗಳಿಂದ ಸೀತಾರಾಮ್ ಮನೆ ಮಾತಾಗಿದ್ದಾರೆ.
ಅವರು ನ್ಯಾಯವಾದಿ ಎಂಬುದು ಅನೇಕರಿಗೆ ತಿಳಿದಿಲ್ಲವಾದರೂ ಮುಕ್ತ ಮುಕ್ತ ಧಾರವಾಹಿ ನೋಡಿದರೆ ಅನುಮಾನ ಮೂಡುವುದು ಸಹಜ. ಇಂತಹ ಟಿ.ಎನ್.ಸೀತಾರಾಮ್ ಅವರು ಭಾನುವಾರ ತನ್ನ ಫೇಸ್ ಬುಕ್ ಖಾತೆಯಲ್ಲಿ ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿ ಪಾಟೀಸವಾಲು ಮಾಡಿದ್ದ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ ಖ್ಯಾತ ನ್ಯಾಯವಾದಿಗಳಾದ ಎಸ್.ವಾಸುದೇವನ್ ಅವರ ಬಳಿ ಬಳಿ ಜೂನಿಯರ್ ಆಗಿ ಕಾರ್ಯ ನಿರ್ವಹಿಸಿದ್ದು, ಆರೂಡಿ ನಾಗರಾಜ್ ಅವರು ನೆರವಿಗೆ ಬಂದಿದ್ದನ್ನು ಸ್ಮರಿಸಿದ್ದಾರೆ. ಅವರು ನೆನಪು ಮಾಡಿಕೊಂಡ ಆ ಕಥೆ ಯಥಾವತ್ತಾಗಿ ಇಲ್ಲಿದೆ ನೋಡಿ.
ನಮ್ಮ ತಂದೆಯವರು ಕಾಲವಾದ ಮೇಲೆ ನಾನು ಬೆಂಗಳೂರಿನ ವರ್ಣ ರಂಜಿತ ಅಧ್ಯಾಯವನ್ನು ಮುಗಿಸಿ ದೊಡ್ಡಬಳ್ಳಾಪುರ ಸೇರಿಕೊಂಡೆ.
ಬೆಂಗಳೂರಿನಲ್ಲಿ ಕೆಲವು ದಿನ ಒಂದು ಪ್ರತಿಷ್ಠಿತ ಲಾಯರ್ ಆಫೀಸಿನಲ್ಲಿ ಜೂನಿಯರ್ ಆಗಿ ಪ್ರಾಕ್ಟೀಸ್ ಮಾಡಲು ಸೇರಿಕೊಂಡಿದ್ದರೂ ನಾನು ಕಲಿತಿದ್ದು ಕಡಿಮೆ.
ಲಾ ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡು ಪಾಸ್ ಆಗಿದ್ದರೂ ನಿಜವಾದ ಕೋರ್ಟ್ ನಲ್ಲಿ ಪ್ರಾಕ್ಟೀಸ್ ಮಾಡುವುದು ಬೇರೆಯದೇ ಲೋಕ, ಬೇರೆಯದೇ ಕಲಿಕೆ. ಅದಕ್ಕೆ ಜೂನಿಯರ್ ಆಗಿದ್ದಾಗ ಹಗಲೆನ್ನದೆ, ರಾತ್ರಿ ಯೆನ್ನದೆ ಚಿಕ್ಕ ವಯಸ್ಸಿನ ಕನಸುಗಳನ್ನು ಬಲಿಗೊಟ್ಟು ಕಲಿಯಲು ಶುರು ಮಾಡಬೇಕಾಗುತ್ತದೆ.
ಆದರೆ ನಾನು ಕಾಲೇಜಿನ ದಿನಗಳಿಂದ ನಾಟಕಲೋಕದಲ್ಲಿ ಪುಟ್ಟ ಸೆಲೆಬ್ರಿಟಿ ಆಗಿಬಿಟ್ಟಿದ್ದರಿಂದ ನಾಟಕ ಲೋಕದ ಆಕರ್ಷಣೆ ಲಾಯರ್ ಆಗಿ ಎನ್ ರೋಲ್ ಆದಮೇಲೂ ನನಗೆ ಹೋಗಲೇ ಇಲ್ಲ. ಹಾಗಾಗಿ ನಾನು ಬೆಂಗಳೂರನಲ್ಲಿ ಕೋರ್ಟ್ ಗಳಿಗೆ ಹೋಗುವುದಿರಲಿ ಸೀನಿಯರ್ ಆಫೀಸಿಗೇ ಚಕ್ಕರ್ ಹೊಡೆದು ನಾಟಕಗಳ ಚಟುವಟಿಕೆಗಳಿಗೆ ಹೊರಟು ಹೋಗುತ್ತಿದ್ದೆ.(ನನ್ನ ಜತೆ ಲಾಯರ್ ಆದ ಗೆಳೆಯರನೇಕರು ಅತ್ಯಂತ ದೊಡ್ಡ ಮಟ್ಟದ ಖ್ಯಾತಿ, ಸ್ಥಾನ ಗಳಿಸಿದರು.ನಾನು ಮಾತ್ರ ಲಾಯರ್ ಆಗಿ ಖ್ಯಾತಿ ಗಳಿಸಿದ್ದು ಬರಿಯ ರೀಲ್ ನಲ್ಲಿ.???? )
ಹಾಗಾಗಿ ನಾನು ಕೆಲವು ತಿಂಗಳ ನಂತರ ದೊಡ್ಡಬಳ್ಳಾಪುರ ಕ್ಕೆ ಹೋಗುವವರೆಗೂ ನಿಜವಾದ ಲಾಯರ್ ಕೆಲಸ ಏನೂ ಕಲಿತಿರಲಿಲ್ಲ.
ದೊಡ್ಡಬಳ್ಳಾಪುರಕ್ಕೆ ಹೋದ ಮೇಲೆ ಅಲ್ಲಿ ನಾನು ಎಸ್.ವಾಸುದೇವನ್ ಎನ್ನುವ ಹಿರಿಯ ಲಾಯರ್ ಬಳಿ ಜೂನಿಯರ್ ಆಗಿ ಸೇರಿಕೊಂಡೆ.ತುಂಬಾ ಹೆಸರು ಮಾಡಿದ್ದ, ಅಪಾರ ಬುದ್ದಿವಂತಿಕೆ, ಚಾಣಾಕ್ಷ ತನ ಇದ್ದ ಲಾಯರ್ ಅವರು. ವಿನೋದ ಪ್ರಜ್ಞೆ ಮತ್ತು ಸ್ವಲ್ಪ ಮುಂಗೋಪವಿದ್ದ ಹಿರಿಯರು.ಅವರ ಬಳಿ ಕ್ರಿಮಿನಲ್ ಕೇಸುಗಳು ಜಾಸ್ತಿ. (ಮುಂದೆ ನನ್ನ ಧಾರಾವಾಹಿಗಳಲ್ಲಿ ಬಂದ ಲಾಯರ್ CSP ಪಾತ್ರ, ಅವರಿಂದ ಹೆಚ್ಚು ಸ್ಫೂರ್ತಿ ಪಡೆದದ್ದು.) ಅವರು ಪ್ರಾಕ್ಟೀಸ್ ಬಿಟ್ಟು ವಿಶ್ರಾಂತ ಜೀವನ ನಡೆಸಬೇಕೆಂದು ಇದ್ದವರು, ನಾನು ಸೇರಿಕೊಳ್ಳುತ್ತೇನೆ ಎಂದು ಕೇಳಿಕೊಂಡಿದ್ದಕ್ಕಾಗಿ ನಾನು ಚೆನ್ನಾಗಿ ಕಲಿತು ದೊಡ್ಡ ಲಾಯರ್ ಆಗುತ್ತೇನೆಂದು ಭಾವಿಸಿ ನನಗೆ ಕಲಿಸುವ ಸಲುವಾಗಿ ಅವರು ಪ್ರಾಕ್ಟೀಸ್ ಮುಂದುವರೆಸಲು ನಿರ್ಧರಿಸಿದರು.(ಅವರ ನಂಬಿಕೆ ಯನ್ನು ನಾನು ನಂತರದಲ್ಲಿ ಉಳಿಸಿಕೊಳ್ಳಲಾಗಲಿಲ್ಲ. ಅವರಿಗೆ ತುಂಬಾ ಬೇಸರ ಮಾಡಿದೆ ಅನ್ನಿಸುತ್ತೆ. ಆ ಬಗ್ಗೆ ನನಗೆ ಈಗಲೂ ಪಶ್ಚಾತ್ತಾಪ ವಿದೆ.)
ಇದು ತುಂಬಾ ಹಿಂದಿನ ಮಾತು.ಆಗ ದೊಡ್ಡ ಬಳ್ಳಾಪುರದಲ್ಲಿ ಒಂದೇ ಒಂದು ಕೋರ್ಟ್ ಇದ್ದದ್ದು. ಮುನ್ಸೀಫ್-ಮ್ಯಾಜಿಸ್ಟ್ರೇಟ್ ರ ಕೋರ್ಟ್. ಸಿವಿಲ್ ದಾವೆಗಳು ನಡೆಯುವುದು ಮುನ್ಸೀಫ್ ಕೋರ್ಟ್ ನಲ್ಲಿ, ಕ್ರಿಮಿನಲ್ ಮೊಕದ್ದಮೆ ಗಳು ನಡೆಯುವುದು ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ. ಆ ಕೋರ್ಟ್ ನಲ್ಲಿ ಸಾಮಾನ್ಯ ವಾಗಿ ಸೋಮವಾರ, ಮಂಗಳವಾರ ಕ್ರಿಮಿನಲ್ ಕೇಸುಗಳೂ ಮಿಕ್ಕ ದಿನ ಸಿವಿಲ್ ಕೇಸುಗಳನ್ನೂ ನಡೆಸುತ್ತಿದ್ದರು. ಶನಿವಾರ ಎರಡೂ ಇರುತ್ತಿದ್ದವು.
ನಾನು ಜೂನಿಯರ್ ಲಾಯರ್ ಆಗಿ ಅವರ ಬಳಿ ಸೇರಿಕೊಂಡು ಒಂದು ವಾರವಾಗಿದ್ದಿರ ಬಹುದು.ನಾನು ಅಡ್ಜರ್ನ ಮೆಂಟ್ ಕೇಳುವುದು ಬಿಟ್ಟು ಇನ್ನೂ ಏನೂ ಕಲಿತಿರಲಿಲ್ಲ.ಸಾಮಾನ್ಯ ವಾಗಿ ನನ್ನ ಸೀನಿಯರ್ ರವರು ಮಧ್ಯಾಹ್ನ ಲಂಚ್ ಬ್ರೇಕ್ ವರೆಗೂ ಇದ್ದು ಮಧ್ಯಾಹ್ನದ ನಂತರದ ಕೇಸುಗಳನ್ನು ಅಡ್ಜರ್ನ ಮೆಂಟ್ ಕೇಳು ಎಂದು ಹೇಳಿ ಹೊರಟು ಹೋಗುತ್ತಿದ್ದರು.
ನಾನು ಸಂಜೆವರೆಗೆ ಹಾಗೂ, ಹೀಗೂ ಬೆಂಗಳೂರಿನ ನಾಟಕ ಲೋಕದ ಕನಸು ಕಾಣುತ್ತಾ ಕಾಲ ಕಳೆದು ಮನೆಗೆ ಬಂದು ಬಿಡುತ್ತಿದ್ದೆ.
ಅದೊಂದು ಶನಿವಾರ.ಶನಿವಾರ ಗಳಂದು ಮಧ್ಯಾಹ್ನ ದ ಮೇಲೆ ಸಾಮಾನ್ಯ ವಾಗಿ ವಿಶೇಷ ಕೇಸುಗಳೇನೂ ಉಳಿಯುತ್ತಿರಲಿಲ್ಲ.ಆದಿನ ಮಧ್ಯಾಹ್ನ ಸೀನಿಯರ್ ಎರಡು ಗಂಟೆಗೆ ಮನೆ ಬಿಟ್ಟ ತಕ್ಷಣ ನಾನು ಬಸ್ ಹತ್ತಿ ಬೆಂಗಳೂರಿಗೆ ಬಂದು ಗೆಳೆಯರ ಜತೆ ಸಂಜೆ ಕಾಲ ಕಳೆಯುವ ಪ್ಲಾನ್ ಹಾಕಿ ಗೆಳೆಯ ಕಿಟ್ಟಿಗೂ ಫೋನ್ ಮಾಡಿ ನಾಲ್ಕು ಗಂಟೆಗೆ ರೆಡಿ ಇರಬೇಕೆಂದೂ ನಾನು ಬರುತ್ತೇನೆಂದೂ ಹೇಳಿಬಿಟ್ಟೆ.( ಆಗ ನನ್ನ ಗೆಳೆಯರ ಪೈಕಿ ಕಿಟ್ಟಿಯ ಮನೆಯಲ್ಲಿ ಮಾತ್ರ ಫೋನ್ ಇದ್ದದ್ದು)
ಅವತ್ತು ಮಧ್ಯಾಹ್ನ ಸೀನಿಯರ್ ಊಟಕ್ಕೆಂದು ಹೊರಟಾಗ ಒಂದೇ ಒಂದು ಪೆಟ್ಟಿ ಕೇಸು, ಎವಿಡೆನ್ಸ್ ಗೆಂದು ಮಧ್ಯಾಹ್ನ ಕ್ಕೆ ಇದೆಯೆಂದೂ ಅದರಲ್ಲಿ ಅಡ್ಜರ್ನ ಮೆಂಟ್ ತೆಗೆದುಕೊಂಡು ನಂತರ ನಾನು ಹೋಗಬಹುದು ಎಂದೂ ಹೇಳಿ ಹೊರಟು ಹೋದರು. ನನಗೆ ಸ್ವಲ್ಪ ಉತ್ಸಾಹ ಭಂಗವಾದರೂ ಬೇರೆ ದಾರಿ ಇರಲಿಲ್ಲ. ಮಧ್ಯಾಹ್ನ ಅಂದರೆ ಮೂರು ಗಂಟೆಗೆ ಕೇಸು ಕೂಗಬೇಕಾದದ್ದು.ಆದರೂ ನಾನು ನಾಲ್ಕಕ್ಕೆ ಬೆಂಗಳೂರು ತಲುಪ ಬಹುದಾಗಿತ್ತು.(ಕೋರ್ಟ್ ಹಿಂದುಗಡೆಯೇ ಡಿ.ಕ್ರಾಸ್ ನಲ್ಲಿ ಬೆಂಗಳೂರಿನ ಬಸ್ ಸ್ಟಾಪ್.ಮೂರೂವರೆಗೆಲ್ಲಾ ಬಸ್ಸು ಸಿಕ್ಕ ಬಹುದಿತ್ತು. ನಾನು ನಾಲ್ಕೂವರೆಗೆ ಬೆಂಗಳೂರು ತಲುಪ ಬಹುದಿತ್ತು. ಬೆಂಗಳೂರಿನಲ್ಲಿ ಗುಟ್ಟಹಳ್ಳಿ ಬಸ್ ಸ್ಟಾಪ್ ಬಳಿಯೇ ಕಿಟ್ಟಿಯ ಮ
ಮಧ್ಯಾಹ್ನ ಆ ಪೆಟ್ಟಿ ಕೇಸನ್ನು ಕರೆದರು.ಸಣ್ಣ ಪುಟ್ಟ ಕೇಸುಗಳಿಗೆ ಪೆಟ್ಟಿ ಕೇಸು ಎಂದು ಕರೆಯುತ್ತಾರೆ. ನನಗೆ ನೆನಪು ಇದ್ದಂತೆ ಪೋಲೀಸ್ ಆಕ್ಟ್ ನಲ್ಲಿ ಗಂಗೂಮೂರ್ತಿ ಅಲಿಯಾಸ್ ಕುಳ್ಳಪ್ಪ ಎಂಬ ವ್ಯಕ್ತಿ ಯ ಮೇಲೆ ಹಾಕಿದ್ದ ಕೇಸು ಅದು.
ಮೂರು ಗಂಟೆಗೆ ಆ ಕೇಸು ಕರೆದಾಗ ನಾನು ಸೀನಿಯರ್ ಹೇಳಿದ್ದಂತೆ ಅಡ್ಜರ್ನ ಮೆಂಟ್ ಕೇಳಿದೆ. ಜಡ್ಜ್ ಸಾಹೇಬರು ಅಡ್ಜರ್ನ ಮೆಂಟ್ ಕೊಡಲು ನಿರಾಕರಿಸಿದರು. ಇಂಥಾ ಕೇಸುಗಳಲ್ಲಿ ಡೇಟು ಕೊಡಲು ಸಾಧ್ಯವಿಲ್ಲ ವೆಂದೂ ಎವಿಡೆನ್ಸ್ ನಾನೇ ನಡೆಸಲೇ ಬೇಕೆಂದು ಹೇಳಿದರು.
ಅದುವರೆಗೆ ನಾನು ಎಂದೂ ವಿಚಾರಣೆಯನ್ನಾಗಲೀ, ಪಾಟೀ ಸವಾಲನ್ನಾಗಲೀ ನಡೆಸಿರಲಿಲ್ಲ. ಬೆವರುತ್ತಾ ನಿಂತೆ.
ನನ್ನ ಸ್ಥಿತಿ ನೋಡಿ ಕೇಸ್ ಫೈಲನ್ನು ನೋಡಿ ರೆಡಿಯಾಗಿರ ಬೇಕೆಂದು ಹೇಳಿ ಮ್ಯಾಜಿಸ್ಟ್ರೇಟ್ ರವರು ಅರ್ಧ ಗಂಟೆ ಟೈಮು ಕೊಟ್ಟರು. ಆಗಿನ ಮ್ಯಾಜಿಸ್ಟ್ರೇಟ್ ರು ಶ್ರೀ ಅನಂತಮೂರ್ತಿ ಎಂದು. ಕಿರಿಯ ವಕೀಲರಿಗೆ ತುಂಬಾ ಪ್ರೋತ್ಸಾಹ ಕೊಡುತ್ತಿದ್ದವರು, ಕಲಿಸುತ್ತಿದ್ದವರು..
ಅರ್ಧ ಗಂಟೆಯಲ್ಲ, ಒಂದು ಗಂಟೆ ಟೈಮ್ ಕೊಟ್ಟರೂ ನಾನೇನೂ ಇಂಪ್ರೂವ್ ಆಗಿದ್ದಂತೆ ಕಾಣಲಿಲ್ಲ. ಕೇಸು ಶುರು ಆಗಿಯೇ ಹೋಯಿತು. ನಾನು ಹೆದರುತ್ತಾ ಕುಳಿತೆ.
ಸುಬ್ರಹ್ಮಣ್ಯ ಘಾಟಿಯ police out post ನ ಹೆಡ್ constable ನರಸಿಂಹಯ್ಯ ಎನ್ನುವರು ಪ್ರಾಸಿಕ್ಯೂಶನ್ ಪರವಾಗಿ ಸರಕಾರೀ ಸಾಕ್ಷ್ಯ ಹೇಳಿದರು.
ಘಾಟಿ ಜಾತ್ರೆ 15 ದಿನ ನಡೆಯುತ್ತೆ.ಅದರಲ್ಲಿ ಒಂದು ದಿನ ರಾತ್ರಿ ಅಂದರೆ ಜನವರಿ ನಾಲ್ಕನೇ ತಾರೀಕಿನ ರಾತ್ರಿ ಒಂದು ಗಂಟೆಯ ಸಮಯದಲ್ಲಿ ತಾನು ಗಸ್ತು ತಿರುಗುವ ಡ್ಯೂಟಿ ಮಾಡುತ್ತಿದ್ದಾಗ ಆಪಾದಿತನು ಜಾತ್ರೆ ಯ ರಸ್ತೆ ಯಲ್ಲಿ ಕಳ್ಳತನ ಮಾಡುವ ಉದ್ದೇಶ ದಿಂದ ಕತ್ತಲಿನಲ್ಲಿ ಮುಖ ಮುಚ್ಚಿ ಕೊಂಡು, ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದರಿಂದಲೂ, ಆತ habitual offender ಆಗಿದ್ದುದರಿಂದಲೂ ಆತನನ್ನು ಪೋಲಿಸ್ ಆಕ್ಟ್ ರೀತ್ಯಾ ಬಂಧಿಸಿದ್ದಾಗಿಯೂ ಹೇಳಿ ಮಹಜರ್, ರಿಪೋರ್ಟ್ ಮುಂತಾದವನ್ನು ಹಾಜರು ಪಡಿಸಿದರು.
ಪೋಲಿಸ್ ಆಕ್ಟ ತೆಗೆದು ನೋಡಿದೆ.92 ನೇ ಸೆಕ್ಷನ್ ನೋಡಿದರೆ ಅದು ಅದೇ ರೀತಿ ಹೇಳುತ್ತಿತ್ತು ಎಂದು ನೆನಪು.
ನನ್ನನ್ನು ಪಾಟೀಸವಾಲು (cross examination) ಮಾಡಲು ಜಡ್ಜ್ ಸಾಹೇಬರು ಹೇಳಿದರು. ನನಗೆ ಏನು ಕೇಳ ಬೇಕೆಂದು ಗೊತ್ತಿಲ್ಲದೆ ನಿಂತಾಗ ನನ್ನ ಆಪ್ತ ರೂ ಹಿರಿಯ ವಕೀಲರೂ ಆದ ಆರೂಡಿ ನಾಗರಾಜ್ ರವರು ನನ್ನ ಕಿವಿಯಲ್ಲಿ ಡೇಟೂ, ಪ್ಲೇಸೂ ಗಮನಸಿ
ಪ್ರಶ್ನೆ ಕೇಳಿ ಎಂದರು.
ನನಗೆ ತಲೆಯಲ್ಲಿ ಒಂದು ಸಣ್ಣ ಲೈಟ್ ಹಚ್ಚಿ ದಂತಾಯಿತು
ಅದರ ನಂತರ ನಾನು ಪೋಲೀಸ್ ದಫೇದಾರ್ ನರಸಿಂಹ ಯ್ಯನವ ರನ್ನು ಪಾಟೀ ಸವಾಲು ಮಾಡಿದ್ದು ಕೆಳಕಂಡಂತೆ ಇತ್ತು.
ನಾನು: ಈ ಘಟನೆ ನಡೆದಿದ್ದು ಜನವರಿ 4 ನೇ ತಾರೀಕು ಅಂತ ಹೇಳಿದಿರಿ
ಪೋ : ಹೌದು
ನಾನು: ಜನವರಿ ನಲ್ಲಿ ಚಳಿ ಜಾಸ್ತಿ ಇರುತ್ತದೆ?
ಪೋ : ಹೌದು..
ನಾನು : ನರಸಿಂಹ ಯ್ಯನವರೇ ಘಾಟಿ ಜಾತ್ರೆ ನಡೆಯೋದು..ಪುಟ್ಟ ಬೆಟ್ಟದ ಹಾಗೆ ಎತ್ತರ ವಾಗಿರೋ ಜಾಗದಲ್ಲಿ..?
ಪೋಲಿಸ್: ಹೌದು
ನಾನು: ಎತ್ತರದ ಜಾಗ ಆದ್ದರಿಂದ ಚಳಿ ಇನ್ನೂಜಾಸ್ತಿ?
ಪೋ; ಹೌದು
ನಾನು : ಅದು ಚಿಕ್ಕ ಊರೋ, ದೊಡ್ಡ ಊರೋ?
ಪೋ: ಚಿಕ್ಕ ಊರು..ದೇವಸ್ಥಾನ ಕ್ಕೆ ಬಂದು ಹೋಗೋರು ಜಾಸ್ತಿ ಅಷ್ಟೇ
ನಾನು ; ಜಾತ್ರೆ ಟೈಮ್ ನಲ್ಲಿ ಎಷ್ಟು ಜನ ಬರ್ತಾರೆ?
ಪೋ; ಲಕ್ಷಾಂತರ ಜನ
ನಾನು ; ಆ ಟೈಮ್ ನಲ್ಲಿ ಅಲ್ಲಿ ಎತ್ತುಗಳ ಜಾತ್ರೆ ನೂ ನಡೆಯುತ್ತೆ?
ಪೋ ; ಹೌದು
ನಾನು. ; ಎಷ್ಟು ದಿನ ನಡೆಯುತ್ತೆ ಆ ಜಾತ್ರೆ
ಪೋ ; 15 ದಿನ
ನಾನು ; ಎಷ್ಟು ಎತ್ತುಗಳು ಬರುತ್ತೆ ಜಾತ್ರೆ ಗೆ?
ಪೋ ; ನಮ್ಮ ಸ್ಟೇಟ್ ನಲ್ಲೆ ಎತ್ತುಗಳ ಜಾತ್ರೇಗೆ ಫಸ್ಟು ಘಾಟಿ ಜಾತ್ರೆ..50 -60 ಸಾವಿರ ಜೊತೆ ಎತ್ತುಗಳು ಬರ್ತವೆ ಅಲ್ಲಿ
ನಾನು ; ಎತ್ತುಗಳ ಜತೆ ರೈತರೂ ಬರ್ತಾರೆ ಅಲ್ಲೀಗೆ?
ಪೋ ; ಹೂಂ..
ನಾನು ; ಆವರೇಜ್ ನಲ್ಲಿ ಒಂದೈವತ್ ಸಾವಿರ ಜನ ಅಲ್ಲಿ ಹಗಲೂ ರಾತ್ರಿ ಇರ್ತಾರೆ?
ಪೋ.; ಹೌದು
ನಾನು ; ಆ ಊರಲ್ಲಿ ಎಷ್ಟು ಮನೆ ಇರಬಹುದು?
ಪೋ. ಒಂದು ನೂರು ಮನೆ ಇರಬಹುದು
ನಾನು : ನೀವು ಜಾತ್ರೆ ಟೈಮ್ ನಲ್ಲಿ ಈ ಆರೋಪಿನ ಹಿಡಿದಿದ್ದು?
ಪೋ; ಹೌದು
ನಾನು; ಈ ಆಪಾದಿತ ಕಳ್ಳತನ ಮಾಡುವ ಉದ್ದೇಶದಿಂದ ಓಡಾಡುತ್ತಿದ್ದ, ಅದಕ್ಕೋಸ್ಕರ ಆತನನ್ನು ಬಂಧಿಸಿದಿರಿ ಅಂತ ಹೇಳಿದಿರಿ?
ಪೋ ; ಹೌದು
ನಾನು ; ಆತನ ಮನಸ್ಸಿನಲ್ಲಿ ಇದ್ದ ಉದ್ದೇಶ ನಿಮಗೆ ಹೇಗೆ ಗೊತ್ತಾಯ್ತು..ನೋಡಿದ ತಕ್ಷಣ ನಿಮಗೆ ಹೇಳಿದನಾ ಕಳ್ಳತನ ಮಾಡೋಕೆ ಓಡಾಡ್ತಾ ಇದ್ದೀನಿ ಅಂತ.?
ಪೋ ; ಅದು ಹಂಗಲ್ಲ….
ನಾನು; ಅಥವಾ ಬೋರ್ಡ್ ಗೀರ್ಡ್ ಹಾಕ್ಕೊಂಡು ಇದ್ದನಾ ತಾನು ಕಳ್ಳತನ ಮಾಡೋಕೆ ಓಡಾಡ್ತಾ ಇದ್ದೀನಿ ಅಂತ…?
(ಕೋರ್ಟ್ ಹಾಲಲ್ಲಿ ಕೆಲವರು ನಕ್ಕರು. ಗಡಿಯಾರ ನೋಡಿದರೆ ನಾಲ್ಕೂವರೆ ಆಗಿತ್ತು. ನಾನು ಬೆಂಗಳೂರಿಗೆ ಹೋಗಿ ಕಿಟ್ಟಿ ಮತ್ತು ಇತರ ಗೆಳೆಯರ ಜತೆ ಕಾಲಕಳೆಯುವ ಗಳಿಗೆ ಕೈ ಜಾರಿ ಹೋಗುತ್ತಿತ್ತು.)
ನಾನು ; ಹೇಳಿ ಸಾರ್.?
ಪೋ ; ಅವನ ಮಕ ನೋಡಿದರೆ ಗೊತ್ತಾಗ್ತಾ ಇತ್ತು ಮಕ ಮುಚ್ಚಿಕೊಂಡು ಜನ ಇಲ್ಲದೆ ಇರೋ ಜಾಗದಲ್ಲಿ ಅನುಮಾನಾಸ್ಪದ ವಾಗಿ ಓಡಾಡ್ತಾ ಇದ್ದ..ರಾತ್ರಿ ಒಂದು ಗಂಟೆ…ಅಷ್ಟು ಹೊತ್ತಿನಲ್ಲಿ ಮನೇಲಿ ಮಲಗಿರಬೇಕು ತಾನೇ…
ನಾನು ; ಅಲ್ಲೀಗೆ ಐವತ್ತು ಸಾವಿರ ಜನ ಬಂದಿದ್ದರು ಅಂದಿರಿ…ಆ ಊರಲ್ಲಿ ಇದ್ದದ್ದು ನೂರು ಮನೆ ಅಂತ ಹೇಳಿದಿರಿ…ಇವನ್ನ ಬಿಟ್ಟು ಮಿಕ್ಕ ಐವತ್ತು ಸಾವಿರ ಜನಾನೂ ಆ ನೂರುಮನೇಲಿ ಮಲಗಿದ್ದರು ಅಂತೀರಾ?
ಪೋ. (ತಬ್ಬಿಬ್ಬು)
ನಾನು ; ಒಂದೊಂದು ಮನೇಲಿ ಎರಡು ಸಾವಿರ ಜನ..!? ಮಲಗೋಕೆ ಆಗುತ್ತೆ ಅಂತೀರಾ..!?
ಪೋ ; ಅದೂ..ಮನೆ ಬಿಟ್ಟು ಹೊರಗಡೇನೂ ಒಂದಷ್ಟು ಜನ ಓಡಾಡ್ತಾ ಇರ್ತಾರಲ್ಲ..
ನಾನು; ಹಾಂ..ಹೌದು..ಬೇಕಾದಷ್ಟು ಜನ ಆಚೇನೂ ಓಡಾಡ್ತಾ ಇರ್ತಾರೆ…ಗಂಗಮೂರ್ತಿ ಒಬ್ಬನೇ ಅಲ್ಲ..ಅಲ್ಲವಾ..?
ಪೋಲೀಸ್ ದಫೇದಾರ್ ಮತ್ತೆ ತಬ್ಬಿಬ್ಬಾದರು
(ನನಗೆ ಕ್ರಾಸ್ ಎಕ್ಸಾಮಿನೇಶನ್ ರುಚಿ ಹತ್ತಲು ಶುರುವಾಯಿತು.ಮುಂದಿನ ಪ್ರಶ್ನೆ ಗಳು ತೋಚುತ್ತಾ ಹೋಯಿತು …ಗಂಟೆ ನಾಲ್ಕೂವರೆ ಆಗಿತ್ತು.ಒಂದು ದಿನ ಬೆಂಗಳೂರಿನ ಮೋಜು ಇಲ್ಲದಿದ್ದರೂ ಪರವಾಗಿಲ್ಲ ಎನ್ನಿಸಿತು)
ನಾನು -; ಜಾತ್ರೆ ಗೆ ಒಂದು ಐದಾರು ಸಿನಿಮಾ ಟೆಂಟುಗಳು ಬಂದಿರುತ್ತೆ?
ಪೋ-: ಹೌದು
ನಾನು :- ಅದರ ಸೆಕೆಂಡ್ ಶೋನೂ ರಾತ್ರಿ ಒಂದು ಗಂಟೇಗೆ ಬಿಡುತ್ತೆ?
ಪೋ ;- ಹೂಂ..ಹೌದು
ನಾನು:- ಅದರ ಪೈಕೀನೂ ಜನ ಬೀದೀಲೇ ಓಡಾಡ್ತಾ ಇರ್ತಾರೆ?
ಪೋ:- ಹೂಂ
ನಾನು :-ಆ ಜನ ಅವತ್ತುಎಲ್ಲಾ ಚಳೀಗೆ ಬೆಡ್ ಶೀಟು, ಮಫ್ಲರ್ ಇಲ್ಲಾದನ್ನೂ ಹೊದ್ದುಕೊಂಡು ಓಡಾಡ್ತಾ ಇದ್ದರು..?
ಪೋ:- ಹಾಂ !..ಹೌದು
ನಾನು:- ಈ ಆರೋಪಿ ಥರ..!?
ಪೋ:- ( ತಬ್ಬಿಬ್ಬು)
ನಾನು :- ಆ ಸಾವಿರಾರು ಜನಾನೂ ಮುಖ ಮುಚ್ಚಿ ಕೊಂಡು ಕಳ್ಳತನ ಮಾಡೋ ಉದ್ದೇಶ ದಿಂದ ಓಡಾಡ್ತಾ ಇದ್ದಾರೆ ಅಂತ ನಿಮಗೆ ಅನುಮಾನ ಬರಲಿಲ್ಲವಾ…!?
(ಕೋರ್ಟ್ ಹಾಲ್ನಲ್ಲಿ ಎಲ್ಲರೂ ನಿಶ್ಶಬ್ದ ವಾಗಿ ಇದನ್ನೇ ಗಮನಿಸುತ್ತಾ ಆನಂದಿಸುತ್ತಿದ್ದರು)
ನಾ. ಹೇಳಿ ಸಾರ್…ಅವರೆಲ್ಲರೂ ಈ ಆರೋಪಿ ಥರಾನೇ ಮುಖ ಮುಚ್ಚಿಕೊಂಡಿದ್ದರು, ಮಧ್ಯ ರಾತ್ರಿ ಒಂದು ಗಂಟೇಲಿ ಓಡಾಡ್ತಾ ಇದ್ದರು.ಅವರೆಲ್ಲರೂ ಕಳ್ಳರು ಅನ್ನೋ .ಅನುಮಾನ ನಿಮಗೆ ಬರಲೇ ಬೇಕಿತ್ತು ಅಲ್ಲವಾ?
ಪೋ:-( ಮೌನ)
ನಾನು :- ಬಿಡಿ…ನೀವು ಆಗ ನೈಟ್ ಬೀಟ್ ಹೋಗ್ತಾ ಇದ್ರಲ್ಲಾ..ನೀವು ಯೂನಿಫಾರಂ ಹಾಕ್ಕೊಂಡಿದ್ದಿರಿ?
ಪೋ:- ಹೌದು
ನಾನು:- ಜತೇಗೆ ಕೈಯಲ್ಲೊಂದು ಲಾಠಿ, ಬ್ಯಾಟರಿ ಇತ್ತು ನಿಮಗೆ ?
ಪೋ.:-ಹೌದೂ..
ನಾನು :- ಜತೇಗೆ ಚಳೀಗೆ ಅಂತ ಒಂದು ಖಾಕಿ ಮಫ್ಲರ್ ಕೂಡಾ ಕೊಟ್ಟಿರ್ತಾರೆ ನಿಮಗೆ?
ಪೋ :- ಹಾಂ..ಹೌದು.
ನಾನು :- ಚಳಿ ಆಗದೆ ಇರಲಿ ಅಂತ ನೀವು ಅದನ್ನ ತಲೇಗೆ, ಮುಖಕ್ಕೆ ಸುತ್ತಿ ಕೊಂಡಿದ್ದಿರಿ...?
ಪೋ :- ಹೂಂ
ನಾನು :- ಮತ್ತೆ… ಆರೋಪೀನೂ ಮಫ್ಲರ್ ನಲ್ಲಿ ಮುಖ ಮುಚ್ಚಿಕೊಂಡು ಮಧ್ಯರಾತ್ರಿ ಲಿ ಕತ್ತಲಲ್ಲಿ ಓಡಾಡ್ತಾ ಇದ್ದ…ನೀವೂ ಮಫ್ಲರ್ ನಲ್ಲಿ ಮುಖ ಮುಚ್ಚಿ ಕೊಂಡು ಕತ್ತಲಲ್ಲಿ ಓಡಾಡ್ತಾ ಇದ್ರಿ.. ಇಬ್ಬರ ಮಧ್ಯೆ ವ್ಯತ್ಯಾಸ ಏನು ಬಂತು ..!?
ಎಂದೆ ನಗುತ್ತಾ ಪ್ರಾಸಿಕ್ಯೂಟರ್ objection ಎಂದರು. ಮ್ಯಾಜಿಸ್ಟ್ರೇಟ್ ಸಾಹೇಬರು ಕೂಡಾ ‘ ಸಾಕು ಸಾಕು ಎಷ್ಟು ಎಳೀತೀರಿ’ ಅಂದರು
ಪೋ :- ಆದರೆ ಅವನು habitual offender …
ನಾನು :- ಅದಕ್ಕೆ ದಾಖಲೆ ಎಲ್ಲಿದೆ? ಅದಕ್ಕೆ ದಾಖಲೆ ಏನೂ ಹಾಜರು ಮಾಡಿರಲಿಲ್ಲ. ವಾದ, ವಿವಾದ ಮಾಡಲು ಏನೂ ಉಳಿದಿರಲಿಲ್ಲ ಅವತ್ತೇ ಗಂಗ ಮೂರ್ತಿಗೆ ಕೇಸಿನಿಂದ ಬಿಡುಗಡೆ ಆಯಿತು..
ಆಚೆ ಬಂದಾಗ ಗಂಗಮೂರ್ತಿ ಮಡಿಚಿ ಒದ್ದೆಯಾಗಿದ್ದ ಹತ್ತು ರೂಪಾಯಿನ ಹತ್ತು ನೋಟುಗಳನ್ನು ಫೀಸ್ ಎಂದು ಕೊಟ್ಟ. ಆ ಕಾಲದಲ್ಲಿ ನೂರು ರೂಪಾಯಿಗೆ ಎರಡು ದಿನ ಗೆಳೆಯರ ಜತೆ ಹಾಯಾಗಿ ಕಾಲ ಕಳೆಯಬಹುದಾಗಿತ್ತು.
( ಅದು ಪುಟ್ಟ ಕೇಸು ಇರಬಹುದು. ಆದರೆ ಮುಂದೆ ನಾನು ಧಾರಾವಾಹಿ ಗಳಲ್ಲಿ ಪಾಟೀ ಸವಾಲು ನಡೆಸಿ ಯಶಸ್ವಿಯಾಗಿ ದ್ದರ ಅಡಿಪಾಯ ಗಂಗಮೂರ್ತಿಯ ಕೇಸು ಅನ್ನಿಸುತ್ತೆ. ಗಂಗಮೂರ್ತಿಯನ್ನೂ, ಆ ದಿನವನ್ನೂ ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನೆನಪಿನ ಬರಹ ಸ್ವಲ್ಪ ಉದ್ದವಾಯಿತು ಅನ್ನಿಸಿದರೆ, ದಯವಿಟ್ಟು ಕ್ಷಮಿಸಿ.) ಎಂದು ಬರೆದುಕೊಂಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….