ದೊಡ್ಡಬಳ್ಳಾಪುರ: ತಾಲ್ಲೂಕಿನ ಕಸಬಾ ಹೋಬಳಿಯ ತಳಗವಾರ, ಕೋಳೂರು, ಕಂಟನಕುಂಟೆ ಮುಂತಾದ ಗ್ರಾಮಗಳ ಮೂಲಕ ಹಾದು ಹೋಗಿದ್ದ ಅಲ್ಪ ಪ್ರಮಾಣದ ವಿದ್ಯುತ್ ಲೈನ್ಗೆ ಬದಲಾಗಿ ಬೃಹತ್ ಕಂಬಗಳು ಹಾಗೂ ಲೈನ್ ಅಳವಡಿಸಲು ಮುಂದಾಗಿರುವ ಕೆಪಿಟಿಸಿಎಲ್ ಕ್ರಮದ ವಿರುದ್ಧ ಹೋರಾಟ ರೂಪಿಸಲು ಅ.4 ರಂದು ಸಂಜೆ ತಳಗವಾರ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಲು ರೈತರು ನಿರ್ಧರಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಮುಖಂಡರು, ರೈತರಿಗೆ ಈಗ ಇರುವುದೇ ತುಂಡು ಭೂಮಿ. ಇಂತಹ ಅಲ್ಪಸ್ವಲ್ಪ ಕೃಷಿ ಭೂಮಿಯಲ್ಲಿ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಿದರೆ ಕೃಷಿ ಮಾಡಲು ಸಾಧ್ಯವೇ ಇಲ್ಲದಾಗಲಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಭೂಮಿ ಕಳೆದು ಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ರೈತರಿಗೆ ಯಾವುದೇ ಮಾಹಿತಿ ನೀಡದೆ ಕಂಬಗಳನ್ನು ಅಳವಡಿಸಲು ಗುಂಡಿಗಳನ್ನು ತೋಡುತ್ತಿರುವುದು ಖಂಡನೀಯ. ಭೂಮಿ ಕಳೆದುಕೊಳ್ಳುವ ರೈತರಿಗೆ ನಿಯಮದ ಪ್ರಕಾರ ಸೂಕ್ತ ಪರಿಹಾರ ನೀಡದೆ ಹಾಗೂ ರೈತರ ಅನುಮತಿ ಇಲ್ಲದೆ ಜಮೀನಿಗೆ ಪ್ರವೇಶ ಮಾಡುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದರು.
ಇಂದು ವಿದ್ಯುತ್ ಇಲ್ಲದೆ ಯಾವುದೇ ಕೆಲಸವು ಸಾಧ್ಯ ಇಲ್ಲ ಎನ್ನುವುದು ಎಲ್ಲರಿಗು ತಿಳಿದಿರುವ ಸಂಗತಿಯೆ. ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರಲಿದೆ. ಆದರೆ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡದೆ ಯಾರದೋ ಪ್ರಗತಿಗೆ ನಾವೇಕೆ ತ್ಯಾಗಮಾಡಬೇಕು ಎಂದು ಪ್ರಶ್ನಿಸಿರುವ ರೈತರು ಸೋಮವಾರದಿಂದ ವಿದ್ಯುತ್ ಕಂಬಗಳ ಅಳವಡಿಕೆಗೆ ಜಮೀನು ಕಳೆದುಕೊಳ್ಳುವ ಗ್ರಾಮಗಳಲ್ಲಿ ಸಭೆಗಳನ್ನು ನಡೆಸಲಾಗುವುದು. ನಂತರ ನಮ್ಮ ಒತ್ತಾಯಗಳ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಕೇಳಿಕೊಳ್ಳಲಾಗುವುದು.
ಈ ಹಿಂದೆ ತಾಲ್ಲೂಕಿನಲ್ಲಿ ಬೃಹತ್ ವಿದ್ಯುತ್ ಕಂಬಗಳನ್ನು ಅಳವಡಿಸುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರ್ವೇ ನಡೆಸಿ ಪರಿಹಾರ ನೀಡಲಾಗಿದೆ. ಈ ಬಾರಿಯು ಸಹ ನಿಯಮಗಳ ಪ್ರಕಾರ ಪರಿಹಾರ ನೀಡದೆ ಕಂಬಗಳ ಅಳವಡಿಕೆಗೆ ಮುಂದಾದರೆ ಅವಕಾಶ ನೀಡದೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ವಿದ್ಯುತ್ ಲೈನ್ ಹಾದು ಹೋಗುವ ಗ್ರಾಮಗಳ ರೈತರು ಸಭೆಯಲ್ಲಿ ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….