ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಅಕ್ಟೋಬರ್ 08ರಂದು ಕೋವಿಡ್-19 ವಿಶೇಷ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿಗೆ 18,000, ನೆಲಮಂಗಲ ತಾಲ್ಲೂಕಿಗೆ 15,000, ದೇವನಹಳ್ಳಿ ತಾಲ್ಲೂಕಿಗೆ 12,000 ಹಾಗೂ ಹೊಸಕೋಟೆ ತಾಲ್ಲೂಕಿಗೆ 15,000 ರಂತೆ ಜಿಲ್ಲೆಗೆ ಒಟ್ಟು 60 ಸಾವಿರಗಳ ಗುರಿಯನ್ನು ನೀಡಲಾಗಿದೆ.
ಪಂಚಾಯಿತಿ ಮಟ್ಟದಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಿ, ಫಲಾನುಭವಿಗಳಿಗೆ ಲಸಿಕೆ ಪಡೆಯುವಂತೆ ಅಗತ್ಯ ಪ್ರಚಾರ ಕೈಗೊಳ್ಳಲಾಗಿದ್ದು, ನಾಗರೀಕರು ಲಸಿಕೆಯನ್ನು ಪಡೆಯಲು ಸಹಕಾರಿಯಾಗುವಂತೆ ಅವರ ಗ್ರಾಮ ಮಟ್ಟಗಳಲ್ಲಿ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳಲ್ಲಿಯೇ ಲಸಿಕಾಕರಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆದ್ಯತೆಯುಳ್ಳ ಗುಂಪುಗಳಾದ ಕೈಗಾರಿಕಾ ವಸಾಹತು, ಕೊಳಗೇರಿ ಪ್ರದೇಶಗಳು, ಆಪಾರ್ಟ್ಮೆಂಟ್ಸ್ ಗಳು, ಕಟ್ಟಡ ಕಾಮಗಾರಿ ಸ್ಥಳಗಳು, ಅಲೆಮಾರಿ ಗುಂಪುಗಳು, 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಕ್ಯಾಬ್ ಡ್ರೈವರ್ ಗಳು, ಹೋಟಲ್ ಸಿಬ್ಬಂದಿಗಳು, ಗಾರ್ಮೆಂಟ್ಸ್ ನೌಕರರು ಹಾಗೂ ಇತರೆ ಎಲ್ಲಾ ಅರ್ಹ ನಾಗರೀಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಹಳ್ಳಿಗಳಲ್ಲಿ ಲಸಿಕಾಕರಣವನ್ನು ನಡೆಸಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಲಭ್ಯತೆ ಸಾಕಷ್ಟು ಇದ್ದು, ಲಸಿಕೆ ಪಡೆಯದೆ ಇರುವ ಸಾರ್ವಜನಿಕರು ಲಸಿಕೆ ಪಡೆಯುವ ಮೂಲಕ ಈ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….