ದೊಡ್ಡಬಳ್ಳಾಪುರ: 35 ವರ್ಷಗಳ ನಂತರ ಒಂದುಗೂಡಿದ ಪ್ರೌಢಶಾಲೆಯ ಸ್ನೇಹಿತ/ ಸ್ನೇಹಿತೆಯರು ತಮಗೆ ವಿದ್ಯೆ ಕಲಿಸಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿರುವ ಘಟನೆ ತಾಲೂಕಿನ ಆರೂಢಿಯಲ್ಲಿ ನಡೆದಿದೆ.
ತಾಲೂಕಿನ ಆರೂಢಿಯಲ್ಲಿರುವ ಅನುದಾನಿತ ಪ್ರೌಢ ಶಾಲೆಯ 1986-1987 ಸಾಲಿನಲ್ಲಿ ಸುಮಾರು 90ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, ಆ ವೇಳೆ 10ಮಂದಿ ಶಿಕ್ಷಕರು ಈ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು ಇಂದು ಪೊಲೀಸ್ ಇಲಾಖೆ, ಇಂಜಿನಿಯರ್ ಇಲಾಖೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಾಗಿ, ರಾಜಕೀಯ ಕ್ಷೇತ್ರ, ರೈತ ಮುಖಂಡರಾಗಿ, ಉದ್ಯಮಿಗಳು, ಹಿರಿಯ ಪುರೋಹಿತರಾಗಿ, ಪ್ರಾಂಶುಪಾಲರಾಗಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ.
ಈ ಸ್ನೇಹಿತರ ಕೂಟ ಕೆಲ ತಿಂಗಳ ಹಿಂದೆ ನಡೆದ ಸ್ನೇಹಿತರ ದಿನದಂದು 35 ವರ್ಷಗಳ ನಂತರ ಭೇಟಿಯಾಗಿ ತಮಗೆ ವಿದ್ಯೆಕಲಿಸಿದ ಗುರುಗಳಿಗೆ ಸನ್ಮಾನಿಸಲು ತೀರ್ಮಾನಿಸಿದರು.
ಈ ನಿರ್ಣಯದಂತೆ ಸುಮಾರು 35 ವರ್ಷಗಳ ನಂತರ ಭಾನುವಾರ ಶಾಲೆಯ ಆವರಣದಲ್ಲಿ ಮರಳಿ ಸೇರಿದ್ದು, ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷರಾದ ವಿ.ಎಸ್.ಶಿವಪ್ರಕಾಶ್, ನಿವೃತ್ತ ಶಿಕ್ಷಕರಾದ ಆರ್.ರಾಮಚಂದ್ರಯ್ಯ, ಎ.ಬೈರಪ್ಪರೆಡ್ಡಿ, ಡಿ.ವಿ.ಶಿವರುದ್ರಯ್ಯ, ಕೆ.ಹನುಮಯ್ಯ, ಹೆಚ್.ನಾಗೇಂದ್ರ, ಎಸ್.ಎಲ್.ವೆಂಕಟರಾಜ್, ಹೆಚ್.ನರಸೀಯಪ್ಪ, ಹೆಚ್.ವಿ.ವೆಂಕಟೇಶ್, ಸುಬ್ಬಣ್ಣ, ಕೆಂಪಯ್ಯ, ಡಿ.ಎನ್.ನರಸಿಂಹಮೂರ್ತಿ, ಪುಟ್ಟರುದ್ರಯ್ಯ, ಸಿಬ್ಬಂದಿಗಳಾದ ಚಿಕ್ಕಣ್ಣ, ಮರಿಯಪ್ಪ, ತಿಮ್ಮಣ್ಣ, ಭ್ರಮರಾಂಭಿಕೆ ಸೇರಿದಂತೆ ದಿ.ಹೆಚ್.ಶಿವಕುಮಾರ್ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕ ಸುದರ್ಶನ್ ಬಾಬು ವಹಿಸಿದ್ದರು.ಕಾರ್ಯಕ್ರಮದಲ್ಲಿ ಇತರೇ ಸಾಲಿನ ಹಲವು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.
ಹಲವು ವರ್ಷಗಳ ನಂತರ ಹಳೆಯ ವಿದ್ಯಾರ್ಥಿಗಳು ಸಮ್ಮಿಲನಗೊಂಡು ನಿವೃತ್ತರಾಗಿದ್ದ ಶಿಕ್ಷಕರು, ಸಿಬ್ಬಂದಿಗಳನ್ನು ಶಾಲೆಗೆ ಕರೆಸಿದಕ್ಕೆ ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು..
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ