ಚಿಕ್ಕಬಳ್ಳಾಪುರ: ಮಹಾನ್ ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಅತ್ಯಂತ ಶ್ರೇಷ್ಠ ಮಹಾಕಾವ್ಯವಾಗಿದ್ದು, ಮನುಷ್ಯ ಭೂಮಿ ಮೇಲೆ ಇರುವವರೆಗೂ, ಇಂದು ಮತ್ತು ಭವಿಷ್ಯದಲ್ಲಿ ಹೀಗೇ ಎಲ್ಲಾ ಕಾಲಕ್ಕೂ ಈ ಕಾವ್ಯವು ಪ್ರಸ್ತುತವಾಗಿರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಅವರು ಬುಧವಾರ ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಯಾವುದೇ ವ್ಯಕ್ತಿ ಜ್ಞಾನಾರ್ಜನೆ ಮೂಲಕ ಉನ್ನತ ಸಾಧನೆ ಮಾಡಲು ರಾಮಾಯಣ ಕಾವ್ಯ ಪ್ರೇರಣೆಯಾಗಿದೆ. ಪರಿಶಿಷ್ಟ ಪಂಗಡದ ಜನರು ಗುರಿ ಮತ್ತು ಪರಿಶ್ರಮದಿಂದ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮುಂದೆ ಬರಬೇಕು. ಈ ಸಮುದಾಯದ ಜನರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿಯಾಗಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವತ್ತ ಗಂಭೀರ ಚಿಂತನೆ ನಡೆಸಬೇಕು ಎಂದರು.
ರಾಮಾಯಣ ಮಹಾಕಾವ್ಯದಲ್ಲಿ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಹಲವು ಮೌಲ್ಯಾದರ್ಶಗಳಿದ್ದು, ಪ್ರತಿಯೊಬ್ಬರೂ ಶ್ರೀ ರಾಮಾಯಣ ಮಹಾಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿ ವಾಲ್ಮೀಕಿಯವರ ಆದರ್ಶ ಚಿಂತನೆಗಳನ್ನು ಅನುಸರಿಸುವ ಅಗತ್ಯವಿದೆ, ಸ್ವಾಮಿನಿಷ್ಠೆ, ಸೋದರ ನಿಷ್ಠೆ, ಪತಿನಿಷ್ಠೆ, ಪತ್ನಿನಿಷ್ಠೆ, ಪಿತೃ ವಾಕ್ಯ ಪರಿಪಾಲನೆ ಸೇರಿದಂತೆ ಹಲವು ರೀತಿಯ ನಿಷ್ಠೆಗಳು ಈ ಕಾವ್ಯದಲ್ಲಿ ಕಾಣ ಸಿಗುತ್ತವೆ. ಎಂದು ತಿಳಿಸಿದರು.
ಯೋಜನೆಗಳ ಅರಿವಿರಲಿ: ಬಲಹೀನ ತಳ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನುರೂಪಿಸಿವೆ. ಬಲಹೀನ ತಳ ಸಮುದಾಯಗಳ ಯುವಕರು ಸ್ವಂತ ಉದ್ಯಮಗಳನ್ನು ಆರಂಭಿಸಿ ಆರ್ಥಿಕವಾಗಿ ಸದೃಢರಾಗಬೇಕೆಂಬ ಉದ್ದೇಶಕ್ಕಾಗಿ 10 ಲಕ್ಷದಿಂದ 1 ಕೋಟಿವರೆಗೆ ಸಾಲ ನೀಡುವ *ಸ್ಟಾಂಡ್ ಅಪ್ ಇಂಡಿಯಾ* ಎಂಬ ಯೋಜನೆಯನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಇದಕ್ಕಾಗಿ 27 ಸಾವಿರ ಕೋಟಿಗಳನ್ನ ಕೇಂದ್ರ ಸರ್ಕಾರ ಮೀಸಲಿಟ್ಟಿದೆ.ಇಂತಹ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಅರಿತು ಸದ್ಬಳಕೆ ಮಾಡಿಕೊಂಡು ಪ್ರಗತಿ ಹೋಂದಬೇಕು ಎಂದು ಯುವಕರಿಗೆ ಸಚಿವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ವಾಲ್ಮೀಕಿ ಭವನ ನಿರ್ಮಿಸುವ ಉದ್ದೇಶಕ್ಕಾಗಿ ಚಿಕ್ಕಬಳ್ಳಾಪುರ ನಗರದ ಹೃದಯ ಭಾಗದಲ್ಲಿ 30 ಗುಂಟೆ ಜಮೀನು ಮಂಜೂರಾತಿಯ ಆದೇಶ ಪತ್ರವನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಿದರು. ಈ ಆದೇಶ ಪತ್ರವನ್ನು ಸಕಾಲದಲ್ಲಿ ಸಿದ್ದಪಡಿಸಿ ಜಯಂತಿಯಂದು ನೀಡಲು ಸ್ಪಂದಿಸಿದ್ದಕ್ಕೆ ಜಿಲ್ಲಾಧಿಕಾರಿಗಳನ್ನು ಈ ವೇಳೆ ಅಭಿನಂದಿಸಿದರು. ಎಸ್.ಎಸ್. ಎಲ್.ಸಿ, ಪಿಯುಸಿ ಮತ್ತು ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪರಿಶಿಷ್ಟ ಪಂಗಡ ಸಮುದಾಯದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಮಹರ್ಶಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃಧ್ಧಿ ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ಗಳನ್ನುವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅರ್. ಲತಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಸಿಇಒ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷ ಅನಂದ್ ರೆಡ್ಡಿ ಬಾಬು,ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಶ್ವತಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಧರ್ , ಚಿಕ್ಕಬಳ್ಳಾಪುರ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಕೆ.ವಿ.ಗವಿರಾಯಪ್ಪ, ಖಜಾಂಚಿ ಕೆ.ಎನ್.ಆವಲಕೊಂಡರಾಯಪ್ಪ, ಸಂಘಟನಾ ಕಾರ್ಯದರ್ಶಿ ಮುನಿವೆಂಟಕಸ್ವಾಮಿ, ಸದಸ್ಯರಾದ ನರಸಿಂಹರಾಜು, ಸಮುದಾಯದ ಮುಖಂಡರಾದ ಶಿವಕುಮಾರ್ ,ಶ್ರೀನಿವಾಸ್, ಕೆ.ಟಿ.ನಾರಾಯಣಸ್ವಾಮಿ, ಪಿ.ಮುನಿರಾಜು (ಜಿ.ಪಂ.ಮಾಜಿ ಸದಸ್ಯರು), ಮುನಿಕೃಷ್ಣ (ಮಾಜಿ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷರು), ಚಿಕ್ಕಬಳ್ಳಾಪುರ ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷರಾದ ಮೂರ್ತಿ.ಜಿ, ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ವಾಲ್ಮೀಕಿ ನಾಯಕ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು/ಸಿಬ್ಬಂದಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……