ದೊಡ್ಡಬಳ್ಳಾಪುರ: ನೀರನ್ನು ಅನಾವಶ್ಯಕವಾಗಿ ಪೋಲು ಮಾಡಬಾರದು, ಏಕೆಂದರೆ ನೀರೆತ್ತಲು ಹಾಗೂ ಸಾಗಿಸಲು ವಿದ್ಯುತ್ ಬೇಕು. ಆದುದರಿಂದ ನೀರನ್ನು ಮಿತವಾಗಿ ಬಳಸಿದರೆ ವಿದ್ಯುತ್ತಿನ ಉಳಿತಾಯ ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಪಿ.ಮಲ್ಲಿಕಾರ್ಜುನ ಗೌಡ ತಿಳಿಸಿದರು.
ತಾಲೂಕಿನ ಹಾಡೋನಹಳ್ಳಿಯಲ್ಲಿನ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು- ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಹಯೋಗದಲ್ಲಿ “ವಿದ್ಯುತ್ ಕ್ಷಮತೆಯ ಬಿ.ಇ.ಇ. ಸ್ಟಾರ್ ಲೇಬಲ್ ಪಂಪಸೆಟ್ ಬಳಕೆ ಮತ್ತು ನೀರಿನ ಸಂರಕ್ಷಣೆ” ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕೆ ಬೆಳೆಗಳಲ್ಲಿ ಹನಿ ಮತ್ತು ತುಂತುರು ನೀರಾವರಿ ಬಳಕೆಯಿಂದ ನೀರಿನ ಮಿತವ್ಯಯ ಸಾಧ್ಯ ಎಂಬ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ವೆಂಕಟೇಗೌಡ.ಜೆ. ನೀರಿನ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ, ಇಂಧನ ಉಳಿತಾಯದ ಪ್ರತಿಫಲ ಕೇವಲ ನಮಗಷ್ಟೇ ಸೀಮಿತವಲ್ಲ, ಅದು ನಿರಂತರ, ಮುಂದಿನ ಪೀಳಿಗೆಗಾಗಿ ಇಂದೇ ಇಂಧನ ಉಳಿತಾಯಕ್ಕೆ ಮುಂದಾಗೋಣ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ನಬಾರ್ಡ್ ನಿವೃತ್ತ ಮಹಾ ಪ್ರಬಂಧಕ ಡಾ.ಹುಲಗೂರ.ಬಿ.ಎಫ್. ಶಕ್ತಿ ಸಂರಕ್ಷಣೆ ಬಗ್ಗೆ ಮತ್ತು AICRP on Agerometerology ಪ್ರಾಧ್ಯಾಪಕ ಡಾ. ಎಂ.ಎನ್.ತಿಮ್ಮೇ ಗೌಡ ನೀರಿನ ಸಂರಕ್ಷಣೆ ಬಗ್ಗೆ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಯೋಜನಾ ಅಭಿಯಂತರರಾದ ದಿನೇಶ್ ಕುಮಾರ್.ಡಿ.ಕೆ ಮತ್ತು ಅಪ್ಪಣ್ಣಗೌಡರ್. ಜಿ. ಪಂಪ್‍ಗಳಲ್ಲಿ ವಿದ್ಯುತ್ ಉಳಿತಾಯ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಗೃಹ ಬಳಕೆಯಲ್ಲಿ ವಿದ್ಯುತ್ ಉಳಿತಾಯದ ಕುರಿತು ವಿವರಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 100 ಜನ ರೈತ /ರೈತ ಮಹಿಳೆಯರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……