ದೊಡ್ಡಬಳ್ಳಾಪುರ: ನಗರ ಡಾ.ರಾಜ್ ಕುಮಾರ್ ಪ್ರತಿಮೆ ಬಳಿ ತಾಲೂಕು ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘ, ತಾಲೂಕು ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘ, ತಾಲೂಕು ಶಿವರಾಜ್‍ಕುಮಾರ್ ಕನ್ನಡ ಸೇನಾ ಸಮಿತಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಅಭಿಮಾನಿಗಳಿಂದ ನಗರದ ಜಯಚಾಮರಾಜೇಂದ್ರ ವೃತ್ತದ ಬಳಿಯಿರುವ ಡಾ.ರಾಜ್ ಪುತ್ಥಳಿ ಬಳಿ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕನ್ನಡ ಚಿತ್ರರಂಗದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅಸಮಾನ್ಯ ಸಾಧನೆ ಮಾಡಿದ್ದ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಸಾಮಾಜಿಕ ಕಳಕಳಿ ಹಾಗೂ ಜೀವನ ಮೌಲ್ಯಗಳನ್ನು ಬಿಂಬಿಸುವ ಚಿತ್ರಗಳು ವಿರಳವಾಗುತ್ತಿರುವ ಇಂದಿನ ದಿನಗಳಲ್ಲಿ ಪುನೀತ್ ರಾಜ್‍ಕುಮಾರ್ ಚಿತ್ರಗಳು ಕುಟುಂಬ ಸಮೇತ ನೋಡುವಂತಹ ಚಿತ್ರಗಳಾಗಿವೆ. ಅವರ ಬೆಟ್ಟದ ಹೂವು ಚಿತ್ರಕ್ಕೆ ಲಿಭಿಸಿದ ರಾಷ್ಟ್ರಪ್ರಶಸ್ತಿ, ಕನ್ನಡ ಚಿತ್ರರಂಗಕ್ಕೆ ಮುಕುಟವಾಗಿದೆ.
ಚಿತ್ರರಂಗದ ಹೊರತಾಗಿ ಸರಳ ಸಜ್ಜನಿಕೆಯ ಮಾನವೀಯ ವ್ಯಕ್ತಿಯಾಗಿದ್ದ ಪುನೀತ್ ರಾಜ್‍ಕುಮಾರ್ ಅವರು, ವೃದ್ದಾಶ್ರಮ, ಅನಾಥಾಶ್ರಮ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳು ಮೊದಲಾದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ತಾಲೂಕು ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಗೌರವ ಅಧ್ಯಕ್ಷ ಡಿ.ಎನ್.ತಿಮ್ಮರಾಜು, ಅಧ್ಯಕ್ಷ ಮಂಜುನಾಥ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಸುರೇಶ್‍ರಾವ್, ಸಂಘಟನಾ ಕಾರ್ಯದರ್ಶಿ ವಿ.ಪರಮೇಶ್, ತಾಲೂಕು ಶಿವರಾಜ್‍ಕುಮಾರ್ ಸೇನಾ ಸಮಿತಿಯ ತಾ. ಅಧ್ಯಕ್ಷ ಜೆ.ಆರ್.ರಮೇಶ್, ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಕನ್ನಡ ಪಕ್ಷದ ಅಧ್ಯಕ್ಷ ಎಂ.ಸಂಜೀವ್ ನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ. ಮೊದಲಾದವರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……