ದೊಡ್ಡಬಳ್ಳಾಪುರ: ಸಾಮಾಜಿಕ ಕಳಿಕಳಿಯುಳ್ಳ ಖ್ಯಾತ ಯುವ ನಟ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಆಚರಿಸಬೇಕಾದ ಸನ್ನಿವೇಶ ಎದುರಾಗಿರುವುದು ನೋವಿನ ಸಂಗತಿ ಎಂದು ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯ ನಿರ್ದೇಶಕ ಜೆ.ರಾಜೇಂದ್ರ ಹೇಳಿದರು.
ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯದಲ್ಲಿ ಅವರು ಮಾತನಾಡಿದರು.
66ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಸಿಬೇಕಿತ್ತು, ಆದರೆ ನಟ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಸಾವಿನಿಂದ ಸರಳವಾಗಿ ಆಚರಿಸಬೇಕಿದೆ. ಸಾಮಾಜಿಕ ಕಳಕಳಿ ಹೊಂದಿದ್ದ ಪುನೀತ್ ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದರು.
ಆರ್.ಎಲ್.ಜಾಲಪ್ಪ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ನಾಗೇಂದ್ರ ಸ್ವಾಮಿ ಮಾತನಾಡಿ, ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ. ಇಂದಿನ ಕರ್ನಾಟಕ ಮೊದಲಿಗೆ ಮೈಸೂರು ಹೆಸರಿನಿಂದ ಗುರುತಿಸಿಕೊಂಡಿತ್ತು ಎಂದು ಏಕೀಕರಣದ ಕುರಿತು ವಿವರಿಸಿದರು.
ಶಾಲೆಯ ಉಪಪ್ರಾಂಶುಪಾಲರಾದ ಧನಂಜಯ ಮಕ್ಕಳ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಕುರಿತು ಕಾನೂನು ಅರಿವು ಕುರಿತು ಮಾತನಾಡಿ, ಮಕ್ಕಳ ಹಕ್ಕುಗಳಿಗೆ ದಕ್ಕೆ ಉಂಟಾದರೆ ಅವರು ಉಚಿತ ಹೆಲ್ಪ್ಲೈನ್ ನಂಬರ್ 1098 ಕರೆ ಮಾಡಿ ದೂರು ದಾಖಲಿಸಬಹುದಾಗಿದೆ. 6 ರಿಂದ 14 ವರ್ಷದ ಪ್ರತಿಯೊಬ್ಬ ಮಗುವು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು. 14 ವರ್ಷದ ಒಳಗಿನ ಯಾವುದೇ ಬಾಲಕ ಅಥವಾ ಬಾಲಕಿಯನ್ನು ಕೆಲಸಕ್ಕೆ ನೇಮಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಒಂದು ವೇಳೆ ಮಕ್ಕಳನ್ನು ಕಾರ್ಮಿಕರನ್ನಾಗಿ ಮಾಡಿಕೊಂಡರೆ ಅವರ ತಂದೆ-ತಾಯಿ ಮತ್ತು ಕಂಪನಿಯ ಮಾಲಿಕ ಶಿಕ್ಷೆಗೆ ಗುರಿಯಾಗುತ್ತಾರೆ.
18 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಯಾವುದೇ ಮಹಿಳೆ ಮತ್ತು ಹೆಣ್ಣು ಮಗು ಯಾರಿಂದಲೂ ಸಹ ದೌರ್ಜನ್ಯಕ್ಕೆ ಒಳಗಾಗಬಾರದು. ದೌರ್ಜನ್ಯಕ್ಕೆ ಒಳಗಾದ ಮಹಿಳೆ ಅಥವಾ ಹೆಣ್ಣು ಮಗು ತಾಲೂಕಿನ ಕಾನೂನು ಸೇವಾ ಸಮಿತಿಯ ಸಲಹೆ ಪಡೆದು ಕಾನೂನು ಕ್ರಮವನ್ನು ದೌರ್ಜನ್ಯ ಮಾಡಿದ ವ್ಯಕ್ತಿಯ ಮೇಲೆ ಕೈಗೊಳ್ಳಬಹುದು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ಮತ್ತು ದೈಹಿಕ ನ್ಯೂನತೆಯುಳ್ಳ ಅಥವಾ ಗುಂಪು ದಾಳಿ ಘರ್ಷಣೆ ಪ್ರಕೃತಿ ವಿಕೋಪ ಪ್ರವಾಹ ಭೂಕಂಪ ತುತ್ತ ದಂತಹ ವ್ಯಕ್ತಿಗಳು ಮತ್ತು ಮತೀಯ ಗಲಭೆಗೆ ಗುರಿಯಾದ ಅಂತಹ ವ್ಯಕ್ತಿಗಳು ಉಚಿತವಾಗಿ ತಾಲೂಕಿನ ಕಾನೂನು ಸೇವಾ ಸಮಿತಿ ಅಥವಾ ಜಿಲ್ಲಾ ಕಾನೂನು ಸೇವಾ ಸಮಿತಿ ಸಹಾಯ ಪಡೆಯಬಹುದು. ವಾರ್ಷಿಕ ಆದಾಯ ಮೂರು ಲಕ್ಷದ ಒಳಗಿನ ಕುಟುಂಬದ ಯಾವುದೇ ವ್ಯಕ್ತಿಯು ದೌರ್ಜನ್ಯಕ್ಕೆ ಒಳಗಾದ ಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಥವಾ ಜಿಲ್ಲಾ ಕಾನೂನು ಸೇವಾ ಸಮಿತಿಯ ಸಹಾಯವನ್ನು ಉಚಿತವಾಗಿ ಪಡೆಯಬಹುದು.
ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯು ತಕ್ಷಣದ ಸಹಾಯಕ್ಕಾಗಿ ಉಚಿತ ಹೆಲ್ಪ್ಲೈನ್ ನಂಬರ್ 1800 425 90 900 ಗೆ ಕರೆ ಮಾಡಬಹುದು. ಮೊಬೈಲ್ ಬಳಸುವಂತಹ ವ್ಯಕ್ತಿಗಳು NALSA Mobile app ಉಚಿತ ಕಾನೂನು ನೆರವನ್ನು ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ, ಭೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……