ಬೆಂಗಳೂರು: ಇಂದು ವೀರವನಿತೆ ಒನಕೆ ಓಬವ್ವ ಅವರ ಜಯಂತಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲೇ ಟ್ವೀಟ್ ಮಾಡಿ ಒನಕೆ ಓಬವ್ವನ ಸ್ಮರಿಸಿದ್ದಾರೆ.
ವೀರವನಿತೆ ಒಕನೆ ಓಬವ್ವ ಜಯಂತಿ ವಿಶೇಷ ಸಂದರ್ಭದಲ್ಲಿ ಅವರಿಗೆ ನಮನ ಸಲ್ಲಿಸುತ್ತೇನೆ. ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ, ಯಾರೂ ಮರೆಯಲು ಸಾಧ್ಯವಿಲ್ಲ. ಅವರು ನಾರಿಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಟ್ವೀಟ್ ಮಾಡಿದ್ದು, ರಾಜ್ಯದ ಪ್ರತಿಯೊಬ್ಬರಿಗೂ ಒನಕೆ ಓಬವ್ವ ಜಯಂತಿಯ ಶುಭಾಶಯಗಳು. ಮಾತೃಭೂಮಿ ಮೇಲಿನ ಅವರ ಭಕ್ತಿ ಅನನ್ಯವಾದದ್ದು ಎಂದು ಹೇಳಿದ್ದಾರೆ.
18ನೇ ಶತಮಾನದ ಪಾಳೆಗಾರ ವೀರ ಮದಕರಿ ನಾಯಕನ ಆಡಳಿತದಲ್ಲಿ ಚಿತ್ರದುರ್ಗ ಕೋಟೆಯ ಕಾವಲುಗಾರನಾಗಿದ್ದ ಕಹಳೆ ಮದ್ದಹನುಮಪ್ಪನ ಪತ್ನಿ ಒನಕೆ ಓಬವ್ವನ ಸಾಹಸ ಇತಿಹಾಸದಲ್ಲಿ ಸದಾ ಹಸಿರು. ದಾಳಿ ಮಾಡಲು ಕಳ್ಳತನದಲ್ಲಿ ನುಗ್ಗಿದ ಹೈದರಲಿ ಸೈನಿಕರನ್ನು ತನ್ನ ಒನಕೆಯಲ್ಲೇ ಕೊಂದು ಬಿಸಾಕಿ, ಕೊನೆಗೆ ವೀರ ಮರಣವನ್ನಪ್ಪಿದ ಧೀರ ಮಹಿಳೆ.
ಒನಕೆ ಓಬವ್ವನ ಜಯಂತಿಯನ್ನು ರಾಜ್ಯಾದ್ಯಂತ ನವೆಂಬರ್ 11ಕ್ಕೆ ಆಚರಿಸುವಂತೆ ರಾಜ್ಯ ಸರ್ಕಾರ ಅಕ್ಟೋಬರ್ನಲ್ಲಿಯೇ ಆದೇಶ ಹೊರಡಿಸಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……