ದೊಡ್ಡಬಳ್ಳಾಪುರ: ಕಾನೂನು ಸೇವೆಗಳ ಪ್ರಾಧಿಕಾರ ಜಾರಿಗೆ ಬಂದ ನಂತರ ಜನರಲ್ಲಿ ಕಾನೂನಿನ ಅರಿವು ಹೆಚ್ಚಾಗುತ್ತಿದ್ದು, ದುರ್ಬಲರಿಗೆ ಉಚಿತ ಕಾನೂನು ನೆರವು ಹಾಗೂ ಲೋಕ ಅದಾಲತ್ಗಳ ಮೂಲಕ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಿ ಕೌಟುಂಬಿಕ ನೆಮ್ಮದಿ ತಂದಿವೆ ಎಂದು ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಅರವಿಂದ ಸಾಯಿಬಣ್ಣ ಹಾಗರಗಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ತಾಲ್ಲೂಕು ಕಾನೂನು ಸೇವಾ ಸಮಿತಿ, ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ರೀತಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಸೇವೆ ನೀಡುತ್ತಿದೆ. ರಾಜ್ಯದ ಎಲ್ಲಾ ತಾಲ್ಲೂಕುಗಳು ಜನಸಾಮಾನ್ಯರಿಗೆ ಉಚಿತ ಕಾನುನಿನ ಅರಿವು ನೆರವು ಕಾರ್ಯಕ್ರವನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕೆಂದು ರಾಷ್ರ್ಟೀಯ ಕಾನೂನು ಪ್ರಾಧಿಕಾರದಿಂದ ನಿರ್ದೇಶನ ನೀಡಲಾಗಿದೆ. 1987ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಜಾರಿಗೆ ಬಂದ ನಂತರ ಜನರಲ್ಲಿ ಕಾನೂನಿನ ಅರಿವು ಮೂಡಿಸಲಾಗುತ್ತಿದೆ. ಸರ್ಕಾರವೇ ಸ್ವಂತ ಖರ್ಚಿನದಲ್ಲಿ ಕಾನೂನು ನೆರವು ನೀಡುತ್ತಿದೆ.ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯ ಸಮಿತಿಗಳನ್ನು ರಚಿಸಲು ಸೂಚಿಸಿದೆ. ಕೆಲ ಕಾಲ ನಿಸ್ತೇಜವಾಗಿದ್ದ ಈ ಸಮಿತಿ 1995ರ ನಂತರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾನೂನು ಸೇವಾ ಸಮಿತಿ ಜನರಿಗೆ ಕಾನೂನಿನ ಬಗ್ಗೆ ಅರಿವು,ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾದವರಿಗೆ ಕಾನೂನು ನೆರವು ಹಾಗೂ ಲೋಕ ಅದಾಲತ್ಗಳನ್ನು ನಡೆಸುವ ಮೂಲಕ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸುವ ಕಾರ್ಯಗಳನ್ನು ಮಾಡುತ್ತಿದೆ. ಮುಖ್ಯವಾಗಿ ರಾಜಿ ಸಂಧಾನಗಳಿಂದ ಹಲವಾರು ಪ್ರಕರಣಗಳು ಇತ್ಯರ್ಥವಾಗಿದ್ದು, ಕುಟುಂಬದ ನೆಮ್ಮದಿಗೆ ಕಾರಣವಾಗಿದೆ.
ಉಚಿತ ಕಾನೂನು ನೆರವು ಅಥವಾ ಸಲಹೆ ಪಡೆಯಲು ಶುಲ್ಕ ರಹಿತ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಮಾನಸಿಕ ಅಥವಾ ಬೇರಾವುದೋ ನ್ಯೂನ್ಯತೆಯನ್ನು ಹೊಂದಿರುವವರು ಮೊದಲಾಗಿ ವಾರ್ಷಿಕ ಆದಾಯ ರೂ1 ಲಕ್ಷ ಕ್ಕಿಂತ ಕಡಿಮೆ ಇರುವ ಎಲ್ಲಾ ವರ್ಗದ, ಜಾತಿಯ ಜನರು ಅರ್ಹರಾಗಿರುತ್ತಾರೆ. ಕಾನೂನು ಸೇವೆಗೆ ವಕೀಲರ ಸಹಕಾರ ಅಗತ್ಯವಾಗಿದ್ದು, ಯುವ ವಕೀಲರು ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಕೀಲರಾದ ಡಿ.ಕೆ.ಲಕ್ಷ್ಮೀನಾರಾಯಣ ಮಾತನಾಡಿ, ಹುಟ್ಟಿನಿಂದ ಸಾಯುವವರಿಗೂ ಒಂದಲ್ಲ ಒಂದು ರೀತಿ ನಮಗೆ ಕಾನೂನಿನ ಅಗತ್ಯವಿದ್ದು, ಈ ಬಗ್ಗೆ ಅರಿವು ಅಗತ್ಯ.ಈ ಹಿಂದೆ ಉಳ್ಳವರಿಗಷ್ಟೇ ಕಾನೂನು, ಬಡವರಿಗೆ ಶೋಷಿತರಿಗೆ ಹಣ ಇಲ್ಲದೇ ನ್ಯಾಯ ಸಿಗುವುದಿಲ್ಲ ಎನ್ನುವ ಅಪವಾಧವಿತ್ತು. ಈಗ ಕಾನೂನು ಸೇವಾ ಸಮಿತಿ ಹಾಗೂ ಕಾನೂನು ಪ್ರಾಧಿಕಾರದಿಂದ ಆರ್ಥಿಕವಾಗಿ ದುರ್ಬಲರಾದವರಿಗೂ ಕಾನೂನು ಸೇವೆ ದೊರೆಯಲಿದೆ ಎಂದರು.
ವಕೀಲರಾದ ಬಿ.ಎಸ್.ರೇಖಾ, ಜೆ.ಮಂಜುಳಾ, ಜನಸಾಮಾನ್ಯರಿಗೆ ಕಾನೂನು ಅರಿವಿನ ಅಗತ್ಯ ಹಾಗೂ ಕಾನೂನು ಸೇವಾ ಸಮಿತಿ ಹಾಗೂ ಕಾನೂನು ಪ್ರಾಧಿಕಾರ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಬೈರೇಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶರಾದ ಜ್ಯೋತಿ ಎಸ್.ಕಾಳೆ, ಪ್ರಧಾನ ಸಿವಿಲ್ ನ್ಯಾಯಾದೀಶರಾದ ಕೆ.ಆರ್.ದೀಪ, ಹೆಚ್ಚುವರಿ ಸಿವಿಲ್ನ್ಯಾಯಾಧೀಶರಾದ ಮಮತಾ ಶಿವಪೂಜೆ, ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ವಕೀಲರಾದ ರಾ.ಬೈರೇಗೌಡ, ರೇಣುಕಾರಾಧ್ಯ, ಎ.ವಿ.ಮುರುಳಿ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……