ದೊಡ್ಡಬಳ್ಳಾಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ಜಾರಿಗೆ ತಂದಿರುವ ಫ್ರೀಶಿಪ್ ಕಾರ್ಡ್ ಅನ್ನು ಅರ್ಹ ವಿದ್ಯಾರ್ಥಿಗಳು ಬಳಸಿಕೊಳ್ಳುವ ಮೂಲಕ ಕಾಲೇಜುಗಳಲ್ಲಿ ಶುಲ್ಕ ರಹಿತವಾಗಿ ದಾಖಲಾಗಬಹುದಾಗಿದ್ದು, ವಿದ್ಯಾರ್ಥಿಗಳು ಯಾವುದೇ ಮಧ್ಯವರ್ತಿಗಳನ್ನು ಆಶ್ರಯಿಸದೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಇಲಾಖೆಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ತಿಳಿಸಿದರು.
ನಗರದ ಆರ್.ಎಲ್.ಜಾಲಪ್ಪ ತಾಂತ್ರಿಕ ವಿದ್ಯಾಲಯದ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ವಿದ್ಯಾರ್ಥಿ ವೇತನ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಫ್ರೀಶಿಪ್ ಕಾರ್ಡ್ ಮೂಲಕ ಅರ್ಹ ವಿದ್ಯಾರ್ಥಿಗೆ ತನ್ನ ಐಚ್ಛಿಕ ಕೋರ್ಸಗಾಗಿ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಶುಲ್ಕರಹಿತವಾಗಿ ಷರತ್ತುಬದ್ಧ ಪ್ರವೇಶಾತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಯಾವುದೇ ಕೋರ್ಸ್‍ಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗೂ ಪ್ರವೇಶಾತಿಯ ದಿನಾಂಕಕ್ಕೂ ಮೊದಲೇ ರಾಜ್ಯದ ವಿದ್ಯಾರ್ಥಿ ವೇತನ ವಿತರಣಾ ಪೋರ್ಟಲ್ ನಲ್ಲಿ ತನ್ನ ಆಧಾರ್ ಸಂಖ್ಯೆ ಹಾಗೂ ತಾನು ಇಚ್ಛಿಸುವ ಕೋರ್ಸ್‍ನ ವಿವರಗಳನ್ನು ಸಲ್ಲಿಸಿ ಫ್ರೀಶಿಪ್ ಕಾರ್ಡ್‍ಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಸೌಲಭ್ಯ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕಕ್ಕಾಗಿ ಕಾಲೇಜುಗಳು ಒತ್ತಾಯಿಸಿದರೆ ಇಲಾಖೆಗೆ ದೂರು ನೀಡಬಹುದು.ಆದರೆ ಕಾರ್ಡ್ ಇಲ್ಲದೇ ಇರುವ ವಿದ್ಯಾರ್ಥಿಗಳ ದೂರನ್ನು ಪರಿಗಣಿಸಲಾಗುವುದಿಲ್ಲ ಎಂದರು.
ಸಮಾಜ ಕಲ್ಯಾಣ ಇಲಾಖೆ ಸೌಲಭ್ಯಗಳ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಬಗೆ ಹರಿಸುವ ಕುರಿತು ಈಗಾಗಲೇ ಫೋನ್ ಇನ್ ಕಾರ್ಯಕ್ರಮ ನಡೆಸಲಾಗಿದೆ. ನ.17ರವರೆಗೆ ವಿದ್ಯಾರ್ಥಿ ವೇತನ ಅಭಿಯಾನ ಹಮ್ಮಿಕೊಂಡಿದ್ದು, ಇಲಾಖೆಗೆ ಸಂಬಂಸಿದ ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬಹುದಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿಗಳಿಗಾಗಿ ಹಲವಾರು ವಿದ್ಯಾರ್ಥಿವೇತನದ ಜೊತೆಗೆ ಬಹುಮಾನ ಧನವನ್ನು ನೀಡಲಾಗುತ್ತಿದೆ. ಎಸ್‍ಎಸ್‍ಎಲ್‍ಸಿಯಲ್ಲಿ ಶೇ.6ಒಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ 7.5 ಸಾವಿರ ರೂ, ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ 15 ಸಾವಿರ ರೂ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ದರ್ಜೆ ಬಂದವರಿಗೆ 20 ಸಾವಿರ ರೂ, ಪದವಿಗೆ 25 ಸಾವಿರ ರೂ, ಸ್ನಾತಕೋತ್ತರ ಪದವಿಗೆ 25ರಿಂದ 30 ಸಾವಿರ ರೂ ವರೆಗೆ ಬಹುಮಾನ ನೀಡಲಾಗುವುದು. ಈ ಹಿಂದೆ ವಿದ್ಯಾರ್ಥಿ ವೇತನಗಳಿಗಾಗಿ ಅಲೆಯುವ ಪರಿಸ್ಥಿತಿ ಇತ್ತು. ಆದರೆ ಈಗ ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ನೇರ ವಿದ್ಯಾರ್ಥಿಗಳೇ ಅರ್ಜಿ ಸಲ್ಲಿಸಬಹುದು, ವಿದ್ಯಾರ್ಥಿ ವೇತನಗಳಿಂದ ಪೋಷಕರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು. ಸಮಾಜ ಕಲ್ಯಾಣ ಇಲಾಖೆಯಷ್ಟೇ ಅಲ್ಲದೇ ಹಿಂದುಳಿದ ವರ್ಗಗಳ ಇಲಾಖೆಯಿಂದಲೂ ಸೌಲಭ್ಯಗಳು ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕಿದೆ. ಇಲಾಖೆಗಳ ವೆಬ್‍ಸೈಟ್ ಮೂಲಕ ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡುವ ಸೌಲಭ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಸೋಮಶೇಖರ್, ಆರ್.ಎಲ್.ಜಾಲಪ್ಪ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ.ಶ್ರೀನಿವಾಸ ರೆಡ್ಡಿ, ದೇವರಾಜ ಅರಸು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಂತೇಶ್ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……