ಮಣಿಪುರ: ಮಣಿಪುರದಲ್ಲಿ ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ ನಡೆದಿದ್ದು, ಸೇನಾಧಿಕಾರಿ, ಅವರ ಪತ್ನಿ ಮತ್ತು ಮಗ ಸೇರಿದಂತೆ 6 ಮಂದಿ ಮೃತಪಟ್ಟಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿಮಾಡಿವೆ. ಇದು ಈ ಭಾಗದಲ್ಲಿ ಈ ವರ್ಷದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.
ಮಣಿಪುರದ ಮ್ಯಾನ್ಮಾರ್ ಗಡಿಯ ಚುರಾಚಂದಪುರ ಜಿಲ್ಲೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ. ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಅಸ್ಸಾಂ ರೈಫಲ್ಸ್‌ಗೆ ಸೇರಿದ ಸೇನಾ ವಾಹನದ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಿದೆ ಎನ್ನಲಾಗಿದೆ. ದಾಳಿ ನಡೆದ ಜಾಗವು ಅತ್ಯಂತ ದುರ್ಗಮ ಪ್ರದೇಶವಾಗಿದ್ದು, ಇಂಫಾಲ್‌ನಿಂದ 100 ಕಿ,.ಮೀ ದೂರದಲ್ಲಿದೆ.
46 ಅಸ್ಸಾಂ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತ್ರಿಪಾಠಿ ಅವರು ಶನಿವಾರ ಸೇನಾ ಶಿಬಿರದತ್ತ ತೆರಳಿದ್ದರು. ನಂತರ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಬೆಂಗಾವಲು ಪಡೆ ಸೇರಿದಂತೆ ಎರಡೂ ವಾಹನಗಳ ಮೇಲೆ ಹೊಂಚುಹಾಕಿ ದಾಳಿ ನಡೆಸಿರುವುದಾಗಿ ವರದಿ ಹೇಳಿದೆ.
ಅಸ್ಸಾಂ ರೈಫಲ್ಸ್ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಕಠುವಾಗಿ ಖಂಡಿಸಿರುವ ಪ್ರಧಾನಿ ಮೋದಿ, ದಾಳಿಯಲ್ಲಿ ಹುತಾತ್ಮರಾದ ಕುಟುಂಬಕ್ಕೆ ನನ್ನ ಸಂತಾಪಗಳು. ನೋವಿನಲ್ಲಿರುವ ಕುಟುಂಬದ ಜೊತೆ ನಿಲ್ಲುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……