ಕೋಲಾರ: ದತ್ತ ಮಾಲಾಧಾರಿಗಳು ಚಿಕ್ಕಮಗಳೂರಿನ ಬಾಬಾಬುಡ್ಡನಗಿರಿಯ ದತ್ತಪೀಠಕ್ಕೆ ಹೊರಟಿದ್ದರು. ಈ ವೇಳೆ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ (ನವೆಂಬರ್ 13) ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕೋಲಾರದ ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಒಂದು ಮಿನಿ ಬಸ್ನಲ್ಲಿ ಹೊರಟಿದ್ದರು. ಬಸ್ನಲ್ಲಿ ಜೈ ಶ್ರೀರಾಮ್ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿಕೊಂಡು ಹೋಗುತ್ತಿದ್ದರು. ಈ ವೇಳೆ ಕೋಲಾರದ ಕ್ಲಾಕ್ ಟವರ್ ಬಳಿಯ ವಿಶಾಲ್ ಮಾರ್ಟ್ ಎದುರು ಏಕಾಏಕಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ವಿಶಾಲ್ ಮಾರ್ಟ್ ಎದುರು ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದು, ವಸೀಂಬೇಗ್ ಎಂಬುವವರಿಗೆ ರೌಡಿ ಶೀಟರ್ಗಳಾದ ಅಕ್ಬರ್, ಎಜಾಜ್ ಮತ್ತು ಜುಮ್ಮು ಎಂಬುವವರಿಂದ ಚಾಕು ಇರಿತವಾಗಿತ್ತು. ಈ ಸಂಬಂಧ ಮೂರು ಜನಕ್ಕೆ ಗಾಯಗಳಾಗಿ ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸ್ಥಳದಲ್ಲಿ ಮಾತ್ರ ಜನರು ಗುಂಪು ಗುಂಪಾಗಿ ಹಾಗೆಯೇ ನಿಂತಿದ್ದರು. ಈ ವೇಳೆ ಘೋಷಣೆಗಳನ್ನು ಕೂಗುತ್ತಾ ದತ್ತಮಾಲಾಧಾರಿಗಳಿದ್ದ ಬಸ್ ಅದೇ ಮಾರ್ಗವಾಗಿ ತೆರಳುತ್ತಿತ್ತು. ಆಗ ಅಲ್ಲಿದ್ದ ಕೆಲವು ಕಿಡಿಗೇಡಿಗಳು ಇದ್ದಕ್ಕಿದಂತೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಬಸ್ ಅಡ್ಡಗಟ್ಟಿದ್ದಾರೆ.
ಈ ಕುರಿತಂತೆ ಆರೋಪಿಗಳ ಬಂಧಿಸುವಂತೆ ಒತ್ತಾಯಿಸಿ ದತ್ತಮಾಲಾಧಾರಿಗಳು ಪ್ರತಿಭಟನೆ ನಡೆಸಿದರು.
ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಪೊಲೀಸ್ ಅಧಿಕಾರಿಗಳು ಕೊಟ್ಟ ನಂತರ ಪ್ರತಿಭಟನೆ ಕೈಬಿಟ್ಟ ಪ್ರತಿಭಟನಾಕಾರರು ಬೇರೊಂದು ವಾಹನದಲ್ಲಿ ಹೊರಟರು.
ಎಸ್ಪಿ ಕಿಶೋರ್ ಬಾಬು ಹಾಗೂ ಜಿಲ್ಲಾಧಿಕಾರಿ ಸೆಲ್ವಮಣಿ ನಗರದಲ್ಲಿ ರೌಂಡ್ಸ್ ಮಾಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಕೋಲಾರ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……