ಬೆಂಗಳೂರು: ಹಿಂದೂ ಎದ್ದರೆ ಕೇಸರಿ, ಹಿಂದೂ ಎದ್ದರೆ ವ್ಯಾಘ್ರ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಗೋ ಮಧುಸೂದನ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದವರು. ತಲೆ ಕತ್ತರಿಸೋದು ಗೊತ್ತು, ತಲೆ ತಗ್ಗಿಸುವುದು ಗೊತ್ತಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹಿಂದೂಗಳು ತಾಳ್ಮೆಯಿಂದ ಇದ್ದಾರೆ, ಹಿಂದೂಗಳು ಸಹನೆಯಿಂದ ಇದ್ದಾರೆ. ಹಾಗಂತ ಹಿಂದೂಗಳು ಹೇಡಿಗಳು ಅನ್ನೋ ಮನೋಭಾವದಿಂದ ಇರಬೇಡಿ ಎಂದರು.
ನೀವು ಟಿಪ್ಪು ವಂಶಸ್ಥರಿರಬಹುದು, ಬಾಬರ್ ವಂಶಸ್ಥರಿರಬಹುದು, ಅಲ್ಲಾವುದ್ದೀನ್ ಖಿಲ್ಜಿ ವಂಶಸ್ಥರಿರಬಹುದು. ದೇಶದ ಮೇಲೆ ದಾಳಿ ಮಾಡಿದ ಯಾವುದೇ ದುರಾಕ್ರಮಿಗಳ ವಂಶಸ್ಥರಿರಬಹುದು. ಆಕ್ರಮಣ ಮಾಡಿದವರೆಲ್ಲ ನಾಶವಾಗಿದ್ದಾರೆಯೇ ವಿನಾ ನಮ್ಮ ದೇಶ ಸಾವಿರಾರು ವರ್ಷಗಳಿಂದ ಹಾಗೇ ಉಳಿದಿದೆ ಎಂದು ಹೇಳಿದರು.
ಇದು ದೇವಭೂಮಿ ಭಾರತ. ನೂರಾರು ವರ್ಷ ಗುಲಾಮಗಿರಿ ಅನುಭವಿಸಿದರೂ ಕೂಡ ಈ ದೇಶವನ್ನು ಕ್ರಿಶ್ಚಿಯನ್‌ಮಯ, ಮುಸ್ಲಿಂಮಯ ಮಾಡಲು ಆಗಿಲ್ಲ. ಶೇ 90ರಷ್ಟು ಭಾರತೀಯರು ಹಿಂದೂಗಳಾಗಿ ಉಳಿದಿದ್ದಾರೆ. ದೇಶಕ್ಕೋಸ್ಕರ ಧರ್ಮಕ್ಕೋಸ್ಕರ ತಮ್ಮ ತಲೆ ಕೊಟ್ಟಿದ್ದಾರೆ. ಇತಿಹಾಸದಲ್ಲಿ ಸಿಖ್ ಸಮುದಾಯದವರು ಇಸ್ಲಾಂ ಮುಂದೆ ಯಾರೂ ತಲೆ ತಗ್ಗಿಸಿಲ್ಲ. ಹಿಂದೂ ಎದ್ದರೆ ಕೇಸರಿ, ಹಿಂದೂ ಎದ್ದರೆ ವ್ಯಾಘ್ರ. ಅವರನ್ನು ಕೆಣಕಬೇಡಿ. ಈ ದೇಶವನ್ನು ಉಳಿಸಿಕೊಳ್ಳೋದು ಹಿಂದೂಗಳಿಗೆ ಗೊತ್ತಿದೆ ಎಂದು ಖಾರವಾಗಿ ಹೇಳಿದರು.
ನಾವು ನಿಮ್ಮ ಯಾರ ಕೃಪೆಯಿಂದಲೂ ಬದುಕಿಲ್ಲ. ನಾವು ಭಗವಂತನ ಸೇವೆಯಲ್ಲಿ ಬದುಕಿದ್ದೇವೆ. ಇದು ಭಗವಂತ ನಿರ್ಮಾಣ ಮಾಡಿದ ದೇಶ, ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರ. ಇದನ್ನು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು. ಯಾವ ಪುಟಗೋಸಿ ಟಿಪ್ಪು ಬಗ್ಗೆ ಮಾತಾಡ್ತೀರಿ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಚಿಕೆ ಬಿಟ್ಟಿದೆ. ಇಂತಹ ಅವಹೇಳನಕಾರಿ ಹಾಗೂ ಅಪಮಾನಕಾರಿ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ನಾಯಕರು ಬಿಡಬೇಕು ಎಂದು ಎಚ್ಚರಿಕೆ ನೀಡುವುದಾಗಿ ತಿಳಿಸಿದರು.
ಇದುವರೆಗೆ ರಾಮಮಂದಿರ ಆಗಿಲ್ಲ ಅಂತಿದ್ರಿ, ಈಗ ರಾಮ ಮಂದಿರ ಆಗಿದೆ. ಕಾಶಿಯ ವಿಶ್ವನಾಥ ಮಂದಿರ, ಮಥುರೆಯ ಕೃಷ್ಣನ ಭೂಮಿ ಮುಕ್ತವಾಗುವ ಹಂತಕ್ಕೆ ಬಂದಿದೆ. ಕರ್ನಾಟಕದಲ್ಲೇ ಟಿಪ್ಪು ಸುಲ್ತಾನ್ ಯಾರಿಗೂ ಬೇಕಾಗಿಲ್ಲ. ಟಿಪ್ಪು ಜಯಂತಿಯನ್ನು ಶ್ರೀರಂಗಪಟ್ಟಣದಲ್ಲೇ ಯಾರಾದ್ರೂ ಆಚರಣೆ ಮಾಡಿದ್ರಾ..? ಎಂದು ಅವರು ಪ್ರಶ್ನಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……