ದೊಡ್ಡಬಳ್ಳಾಪುರ: ನಮ್ಮೂರ ಕೆರೆ ನಮ್ಮ ಹೆಮ್ಮೆ ಎನ್ನುವ ಭಾವನೆ ಮೂಡದ ಹೊರತು ಸರ್ಕಾರ ಎಷ್ಟೇ ಖರ್ಚು ಮಾಡಿ ಕೆರೆ ಅಭಿವೃದ್ಧಿಗೊಳಿಸಿದರು ಕೆರೆ ಗಲೀಜು ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ ಹೇಳಿದರು.
ನಗರದ ಮುತ್ತೂರು ಕೆರೆ ಹಾಗೂ ನಾಗರಕೆರೆಯಲ್ಲಿ ಬುಧವಾರ ನಡೆದ ಗಂಗಾ ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎರಡು ವರ್ಷಗಳ ಹಿಂದೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಾಗರಕೆರೆ, ಮುತ್ತೂರು ಕೆರೆ ಅಭಿವೃದ್ಧಿಗೆ ಮುಂದಾದಾಗ ನಗರದ ಬಸ್ ನಿಲ್ದಾಣದಲ್ಲಿನ ಫುಟ್ಪಾತ್ನಲ್ಲಿ ಕುಳಿತು ಚಪ್ಪಲಿ ಮಾರಾಟ ಮಾಡುವ ರತ್ನಮ್ಮ ಅವರು ಸಹ ರೂ10 ದೇಣಿಗೆ ನೀಡಿದ್ದರು. ಕಂಪನಿಗಳವರು ರೂ25 ಲಕ್ಷ ನೀಡಿದ್ದರು. ಆದರೆ ಕೆರೆ ಉಳಿಸಬೇಕು ಎನ್ನುವ ಮನೋಭಾವದಿಂದ ರೂ10 ದೇಣಿಗೆ ನೀಡಿದ್ದು ಸಹ ಸ್ಮರಣೀಯ. ಕೆರೆಗೆ ನಿಜವಾದ ವಾರುಸುದಾರರು ಇಂತಹ ಜನ. ಹೀಗಾಗಿಯೇ 20 ವರ್ಷಗಳ ನಂತರ ನಾಗರಕೆರೆ ಕೋಡಿ ಬಿದ್ದಿರುವ ಸಂದರ್ಭದಲ್ಲಿ ರತ್ನಮ್ಮ ಅವರಿಂದಲೇ ಗಂಗಾಪೂಜೆ ಮಾಡಿಸಲಾಗಿದೆ. ಜನರಲ್ಲಿ ಕೆರೆಯ ಬಗ್ಗೆ ಪ್ರೀತಿ ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಷ್ಟೇ ಅಲ್ಲ ಮಳೆಗಾಲದಲ್ಲಿ ಬರುವ ನೀರು ತಡೆದು ಜೀವ ರಕ್ಷಣೆ ಮಾಡಿಕೊಳ್ಳಲು ಕಷ್ಟವಾಗಲಿದೆ ಎಂದರು.
ನಗರದ ಹೃದಯ ಭಾಗದಲ್ಲಿನ ಮುತ್ತೂರು, ನಾಗರಕೆರೆಗಳನ್ನು ಶುದ್ಧವಾಗಿಟ್ಟುಕೊಳ್ಳುವ ಕಡೆಗೆ ಸಾರ್ವಜನಿಕರು ಸಂಕಲ್ಪ ಮಾಡದೇ ಇದ್ದರೆ ಜೀವಜಲ ಕೆಡುವ ಜೊತೆಗೆ ಪ್ರಾಣಿಸಂಕುಲ, ಮನುಷ್ಯರ ಆರೋಗ್ಯವು ಹಾಳಾಗಲಿದೆ ಎಂದರು.
ಗಂಗಾಪೂಜೆಯಲ್ಲಿ ಐಟಿ ಉದ್ಯೋಗಿ ಜಿ.ರಾಜಶೇಖರ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು,ಉದ್ಯಮಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇದ್ದರು.
ತೆಪ್ಪದಲ್ಲಿ ಸುತ್ತಾಡಿ ಖುಷಿ ಪಟ್ಟರು: ಎರಡು ವರ್ಷಗಳ ಹಿಂದೆ ಈ ಕೆರೆಗೂ ನೀರು ಬರುತ್ತವೆ ಎನ್ನುವುದನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲದಷ್ಟು ಹೂಳು ಹಾಗೂ ಜಾಲಿ ಮರಗಳು ಬೆಳೆದು ನಿಂತಿದ್ದವು. ಆದರೆ ಇಂದು ಇಡೀ ಕೆರೆ ನೀರಿನಿಂದ ತುಂಬಿಕೊಂಡಿದ್ದು, ಕೆರೆಯ ಸುತ್ತಲು ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.
ಬುಧವಾರ ಬೆಳಿಗ್ಗೆ ಕೆರೆಯಲ್ಲಿ ನಡೆದ ಗಂಗಾಪೂಜೆ ನಂತರ ತೆಪ್ಪದಲ್ಲಿ ಕುಳಿತು ಇಡೀ ಕೆರೆಯನ್ನು ಒಂದು ಸುತ್ತ ಬಂದ ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ ಹಾಗೂ ಕೆರೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದವರು ಖುಷಿಪಟ್ಟು ಸಂತಸಹ ವ್ಯಕ್ತಪಡಿಸಿದರು.
ತೆಪ್ಪದಲ್ಲಿ ಕುಳಿತು ಕೆರೆಯ ಮಧ್ಯ ಭಾಗಕ್ಕೆ ಹೋಗಿ ಮಹಿಳೆಯರು ಪೂಜೆಸಲ್ಲಿಸಿ ಬಾಗಿನ ಅರ್ಪಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……