ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ 2021ರ ನವೆಂಬರ್ 23 ರಿಂದ 27 ರವರೆಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಮೊದಲ ಸುತ್ತನ್ನು ಹಮ್ಮಿಕೊಳ್ಳಲಾಗಿದ್ದು, 1 ವರ್ಷದಿಂದ 19 ವರ್ಷದೊಳಗಿನ ಜಿಲ್ಲೆಯ ಎಲ್ಲಾ ಮಕ್ಕಳು ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಅಲ್ಬೆಂಡಾಝೋಲ್ ಜಂತುಹುಳು ನಾಶಕ ಮಾತ್ರೆಯನ್ನು ಉಚಿತವಾಗಿ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದರು.
ತಾಲೂಕಿನ ಖಾಸ್ ಬಾಗ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ, ಶಾಲಾ ಕಾಲೇಜುಗಳಲ್ಲಿ 1 ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಅಲ್ಬೆಂಡಾಝೋಲ್ ಜಂತುಹುಳು ನಾಶಕ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೆ, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಬಳಿಯು ಅಲ್ಬೆಂಡಾಝೋಲ್ ಮಾತ್ರೆಗಳನ್ನು ಪಡೆದು, ಸೇವಿಸಬಹುದಾಗಿದೆ.
ಜಂತುಹುಳು ಸೋಂಕಿನಿಂದಾಗಿ ಮಕ್ಕಳು ರಕ್ತಹೀನತೆ, ಪೌಷ್ಠಿಕಾಂಶ ಕೊರತೆ, ಹಸಿವು ಆಗದಿರುವುದು, ನಿಶ್ಯಕ್ತಿ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವ ಅಪಾಯಕಾರಿ ಸಮಸ್ಯೆಗಳಿಂದ ಬಳಲುತ್ತಾರೆ. ಆದ್ದರಿಂದ, ಇಂತಹ ಆರೋಗ್ಯ ಸಮಸ್ಯೆಗಳಿಂದ ಎಲ್ಲಾ ಮಕ್ಕಳನ್ನು ರಕ್ಷಿಸಲು 2021ರ ನವೆಂಬರ್ 23 ರಿಂದ 27 ರೊಳಗೆ ಅಲ್ಬೆಂಡಾಝೋಲ್ ಮಾತ್ರೆಗಳನ್ನು ಕೊಡಿಸಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ ಮಾತನಾಡಿ, ಮಕ್ಕಳನ್ನು ಜಂತುಹುಳು ನಿವಾರಣೆಗೆ ಒಳಪಡಿಸುವುದರಿಂದ ರಕ್ತಹೀನತೆಯನ್ನು ನಿಯಂತ್ರಿಸುತ್ತದೆ, ಪೌಷ್ಠಿಕಾಂಶ ಹೀರಿಕೆಯನ್ನು ಸುಧಾರಿಸುತ್ತದೆ, ಏಕಾಗ್ರತೆ, ಕಲಿಕಾ ಸಾಮರ್ಥ್ಯ ಹಾಗೂ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾತಿಯನ್ನು ಸುಧಾರಿಸಲು ನೆರವಾಗುತ್ತದೆ, ಕೆಲಸದ ಸಾಮರ್ಥ್ಯ ಹಾಗೂ ಜೀವನೋಪಾಯದ ಅವಕಾಶಗಳನ್ನು ವೃದ್ಧಿಸಲು ನೆರವಾಗುತ್ತದೆ ಹಾಗೂ ಪರಿಸರದಲ್ಲಿ ಜಂತುಹುಳುಗಳನ್ನು ಕಡಿಮೆ ಮಾಡುವುದರ ಮೂಲಕ ಸಮುದಾಯಕ್ಕೆ ಪ್ರಯೋಜನಕಾರಿಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಈ ವೇಳೆ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀ ನಿವಾಸ್ ಸೇರಿದಂತೆ ಶಾಲೆಯ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……