ದೊಡ್ಡಬಳ್ಳಾಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ 6 ಸ್ಥಾನಗಳನ್ನು ಗೆಲ್ಲಲೇ ಬೇಕಾದ ಸವಾಲಿದ್ದು, ಮುಂದಿನ ವಿಧಾನಸಭಾ ಚುನಾವಣೆಯ ಜೆಡಿಎಸ್ ರಾಜಕೀಯ ಭವಿಷ್ಯಕ್ಕೆ ಬುನಾದಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಒಕ್ಕಲಿಗರ ಭವನದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
2018ರಿಂದ ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗಿಲ್ಲ. ಹೀಗಾಗಿ ಮೈತ್ರಿ ಸರ್ಕಾರಗಳನ್ನು ರಚಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಜೊತೆಗಿನ ಮೈತ್ರಿ ಸಹ ಸಫಲವಾಗಲಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಆಡಳಿತದ ಬಗ್ಗೆ ಜನರಿಗೆ ಅಸಮಧಾನವಿದ್ದು, 2023ರ ವಿಧಾನ ಸಭಾ ಚುನಾವಣೆಯಲ್ಲಿ 120 ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ. ಯಾವುದೇ ಪಕ್ಷದ ಹಂಗಿಲ್ಲದೇ ಸ್ವತಂತ್ರ್ಯವಾಗಿ ಜೆಡಿಎಸ್ ಸರ್ಕಾರ ರಚನೆ ಮಾಡುವಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.
ಕಾಂಗ್ರೆಸ್‍ಗಿಂತ ಜೆಡಿಎಸ್ ಮುಂದೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‍ಗಿಂತ ಜೆಡಿಎಸ್ ಮುಂದಿದೆ. ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಸದೃಢವಾಗಿದ್ದು, ನಮ್ಮ ಪಕ್ಷದ ಅಭ್ಯರ್ಥಿಗೆ ಬಹುಮತ ಲಭಿಸಿವೆ. ಮುಖಂಡರ ನಡುವೆ ಕೆಲ ಸಮಸ್ಯೆ ಇದ್ದು, ಬಗೆಹರಿದಿದೆ. ಅಂಕಿ ಅಂಶಗಳ ಆಧಾರದ ಮೇಲೆ ಕಾಂಗ್ರೆಸ್‍ಗಿಂತ ಜೆಡಿಎಸ್ ಮತಗಳಿಸುವಲ್ಲಿ ಮುಂದೆ ಇದೆ. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಚಿಹ್ನೆಗಳ ಆಧಾರದ ಮೇಲೆ ಗೆದ್ದಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶವಿಲ್ಲ, ಹಾಗಾಗಿ ಜೆಡಿಎಸ್ ಮುಖಂಡರು ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಎಲ್ಲಾ ಜನಾಂಗದವರಿಗೆ ಪ್ರಾತಿನಿಧ್ಯ ನೀಡಿ, ಜಾತ್ಯಾತೀತ ಪರಿಕಲ್ಪನೆ ನೀಡಿದವರಲ್ಲಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಪ್ರಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್‍ಗೆ ಹೆಚ್ಚಿನ ಬಹುಮತ ದೊರಕುವ ವಿಶ್ವಾಸವಿದ್ದು, ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಮುಂದೆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರನ್ನಾಗಿ ಮಾಡುವುದಕ್ಕೆ ಹಿರಿಯ ಜೆಡಿಎಸ್ ಮುಖಂಡರಾದ ಅಪ್ಪಯ್ಯಣ್ಣ ಹಾಗೂ ನರಸಿಂಹಯ್ಯ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ಜೆಡಿಎಸ್ ಮುಖಂಡ ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಹಣ ಬಲದಿಂದ ಅಧಿಕಾರಕ್ಕೆ ಬರಲು ಸಿದ್ದತೆ ನಡೆಸಿವೆ. 2023ರ ವಿಧಾನಸಭಾಚುನಾವಣೆಗೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಜೆಡಿಎಸ್ ಶಾಸಕರು ಹೆಚ್ಚಾಗಿ ಗೆಲ್ಲಬೇಕಿದೆ. ನಾವು ಎಂದೆಂದಿಗೂ ಜೆಡಿಎಸ್‍ನಲ್ಲಿಯೇ ಇರುತ್ತೇವೆ ಹೊರತು ಪಕ್ಷ ತೊರೆಯುವುದಿಲ್ಲ. 2023ಕ್ಕಾದರೂ ಬಿ.ಮುನೇಗೌಡ ಅವರನ್ನು ಗೆಲ್ಲಿಸುವ ಪಣ ತೊಡಬೇಕಿದೆ ಎಂದರು.
ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೃಷ್ಣಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಿ, ಎಪಿಎಂಸಿ ಉಪಾದ್ಯಕ್ಷ ಲೋಕೇಶ್, ಹಿರಿಯ ಮುಖಂಡರಾದ ವೇಣುಗೋಪಾಲ್, ಎಚ್.ಅಪ್ಪಯ್ಯಣ್ಣ, ಎ.ನರಸಿಂಹಯ್ಯ, ಹರೀಶ್ ಗೌಡ, ಸುನಿಲ್ ಕುಮಾರ್, ಕುಟುಂನಹಳ್ಳಿ ಮಂಜುನಾಥ್ ಡಾ.ಎಚ್.ಜಿ.ವಿಜಯಕುಮಾರ್, ಆಂಜನ ಗೌಡ, ಆನಂದ್, ಲೋಕೇಶ್ ಬಾಬು, ದೇವರಾಜಮ್ಮ, ಮಧುಸೂಧನ್ ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….